ಹೊಸ ವರ್ಷದ ತುರ್ತು ಪ್ರತಿಸ್ಪಂದನಕ್ಕಾಗಿ ‘ಆರೋಗ್ಯ ಕವಚ 108’ ಸಿದ್ಧ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.30: ಹೊಸ ವರ್ಷಾಚರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯುವ ದೃಷ್ಟಿಯಿಂದ ಆರೋಗ್ಯ ಕವಚ 108 ಅಂಬ್ಯುಲೆನ್ಸ್ ಸೇವೆಯು ರಾಜ್ಯಾದ್ಯಂತ ಸುಸಜ್ಜಿತಗೊಂಡಿದೆ.
ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆಗಳಲ್ಲಿ ಸರಾಸರಿ ಶೇ.30 ರಿಂದ 35ರಷ್ಟು ಅಪಘಾತದ ಪ್ರಕರಣಗಳು ವರದಿಯಾಗಿವೆ. 108 ಅಂಬ್ಯುಲೆನ್ಸ್ ಸೇವೆಯು ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರ ಹೊಂದಿರುತ್ತದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಮಂಗಳೂರು ನಗರಗಳಲ್ಲಿರುವ ಪೋಲಿಸ್ ನಿಯಂತ್ರಣ ಕೇಂದ್ರದ ಹಿರಿಯ ಅಧಿಕಾರಿಗಳಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಅವಘಡ ಸಂಭವಿಸಿದ ಸ್ಥಳಕ್ಕೆ ತ್ವರಿತವಾಗಿ ತಲುಪುವ ನಿಟ್ಟಿನಲ್ಲಿ ನೆರವಾಗುತ್ತದೆ.
ಹೊಸವರ್ಷದ ರಾತ್ರಿ 11.45 ರಿಂದ 12.30 ವರೆಗೆ ಮೊಬೈಲ್ ಫೋನ್ ಸಂಪರ್ಕಗಳು ಹೆಚ್ಚು ಬಳಕೆಯಾಗುವ ಹಿನ್ನೆಲೆಯಲ್ಲಿ ಪೊಲೀಸ್ ನಿಸ್ತಂತು ಜಾಲ(ವೈರ್ಲೆಸ್)ದ ಮೂಲಕ ಅವಘಡಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸುವುದಕ್ಕಾಗಿ ಅಂಬ್ಯುಲೆನ್ಸ್ಗಳನ್ನು ಹತ್ತಿರದ ಪೊಲೀಸ್ ಠಾಣೆ, ಆಸ್ಪತ್ರೆ ಮತ್ತು ಅಗ್ನಿಶಾಮಕ ಇತ್ಯಾದಿಗಳಲ್ಲಿ ನಿಯೋಜಿಸಲಾಗುವುದು.
ತುರ್ತು ಅಗತ್ಯದ ಸಂದರ್ಭಕ್ಕಾಗಿ ಅಂಬ್ಯುಲೆನ್ಸ್ಗಳ ಮತ್ತು ಸಿಬ್ಬಂದಿಗಳ ಮೊಬೈಲ್ ನಂಬರ್ಗಳನ್ನು ಹಂಚಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಜ್ಯದ ಮುಖ್ಯಸ್ಥರಾದ ಹನುಮಂತ ಆರ್.ಜಿ.-7829500108, ಮಾರ್ಕೆಟಿಂಗ್ ವಿಭಾಗದ ನೌಶಾದ್ ಅಲಿ ಖಾನ್- 9620510108 ಅವರು ಈ ಮೇಲಿನ ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿವಿಕೆ-ಇಎಂಆರ್ಐ ಸಂಸ್ಥೆಯ ಪ್ರಕಟನೆ ತಿಳಿಸಿದೆ.







