ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
ಉಡುಪಿ, ಡಿ.30: 2019-20ನೇ ಸಾಲಿನಲ್ಲಿ ರೈತರಿಂದ ಕನಿಷ್ಟ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ಸರಕಾರದಿಂದ ಆದೇಶವಾಗಿದೆ. ಸಾಮಾನ್ಯ ಭತ್ತವನ್ನು ಕ್ವಿಂಟಾಲ್‌ಗೆ 1815 ರೂ. ಹಾಗೂ ಗ್ರೇಡ್ ಎ ಭತ್ತವನ್ನು ಕ್ವಿಂಟಾಲ್‌ಗೆ 1835 ರೂ. ದರದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಂದ ಗರಿಷ್ಟ 40 ಕ್ವಿಂಟಾಲ್‌ವರೆಗೆ 2020ರ ಜ.1ರಿಂದ ಮಾರ್ಚ್ 31ರವರೆಗೆ ಖರೀದಿಸಲಾಗುತ್ತದೆ.
ಭತ್ತ ಖರೀದಿಸಲು ಆನ್‌ಲೈನ್ ವ್ಯವಸ್ಥೆ ಮಾಡಲಾಗಿದ್ದು, ಭತ್ತ ನೀಡಲು ಇಚ್ಛಿಸುವ ರೈತರು ಸಮೀಪದ ಎಪಿಎಂಸಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಬೇಕಿದೆ. ನೋಂದಣಿ ಸಂದರ್ದಲ್ಲಿ ಕೃಷಿ ಇಲಾಖೆಯಿಂದ ಪಡೆದಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುವಿ ಮಾಹಿತಿ ವ್ಯವಸ್ಥೆಯಡಿ (ಫ್ರುಟ್ಸ್ ಗುರುತಿನ ಚೀಟಿ) ನೋಂದಣಿಯಾಗಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಾಗಿದೆ. ಈ ಗುರುತಿನ ಚೀಟಿ ಇಲ್ಲದಿದ್ದಲ್ಲಿ ಅಥವಾ ಅವರ ಗುರುತಿನ ಚೀಟಿಯ ಮಾಹಿತಿ ಪರಿಷ್ಕರಿಸಲು ಅವರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು.
ಭತ್ತ ಮಿಲ್ಲಿಂಗ್ ಮಾಡಲು ಇಚ್ಛಿಸುವ ಅಕ್ಕಿ ಗಿರಣಿ ಮಾಲಕರು ಪಾನ್ ಕಾರ್ಡ್ ನಂಬರ್ ಹಾಗೂ ಆಧಾರ್ ನಂಬರ್, ಬ್ಯಾಂಕ್ ಅಕೌಂಟ್ ಮಾಹಿತಿ, ಸಂಗ್ರಹಣಾ ಸಾಮರ್ಥ್ಯ, ಭತ್ತದ ಹಲ್ಲಿಂಗ್ ಸಾಮರ್ಥ್ಯದ ಮಾಹಿತಿ ನೀಡಿ ಉಪನಿರ್ದೇಶಕರ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಡುಪಿ ಜಿಲ್ಲೆ ಇಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





