1.25 ಕೋಟಿ ರೂ. ಮೌಲ್ಯದ ‘ಎರಡು ತಲೆ’ ಹಾವು ವಶಕ್ಕೆ

ಫೈಲ್ ಫೋಟೊ | Hindustantimes
ಭೋಪಾಲ, ಡಿ.30: ಮಧ್ಯಪ್ರದೇಶದ ನರಸಿಂಗಗಢದಲ್ಲಿ 1.25 ಕೋಟಿ ರೂ. ಮೌಲ್ಯದ ಅಪರೂಪದ ಎರಡು ತಲೆ ಹಾವನ್ನು (ಇರ್ತಲೆ ಹಾವು) ಮಾರಾಟ ಮಾಡಲು ಪ್ರಯತ್ನಿಸಿದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಅಪ್ರಾಪ್ತ ವಯಸ್ಕರೂ ಸೇರಿದ್ದಾರೆ.
ಇದೊಂದು ಅಪರೂಪದ ವಿಷರಹಿತ ಹಾವಾಗಿದ್ದು ಕೆಲವು ಔಷಧ, ಸೌಂದರ್ಯ ವರ್ಧಕ ತಯಾರಿಸಲು, ವಾಮಾಚಾರ ನಡೆಸುವವರಿಗೆ ಅಗತ್ಯವಾಗಿದೆ. ಇರ್ತಲೆ ಹಾವಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಇದು ಮನೆಯಲ್ಲಿದ್ದರೆ ಅದೃಷ್ಟ ಎಂದು ಭಾವಿಸಿ ಇವನ್ನು ಸಾಕುವವರೂ ಇದ್ದಾರೆ. ಮೂವರು ವ್ಯಕ್ತಿಗಳು ಬಸ್ಸು ನಿಲ್ದಾಣದ ಬಳಿ ನಿಂತು ಪೋನಿನ ಮೂಲಕ ಹಾವು ಮಾರಾಟದ ವ್ಯವಹಾರ ಕುದುರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅವರನ್ನು ಪ್ರಶ್ನಿಸಿದಾಗ ಇರ್ತಲೆ ಹಾವನ್ನು ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ಬಾಯಿ ಬಿಟ್ಟಿದ್ದಾರೆ.
ಬಳಿಕ ಅವರ ಬಳಿಯಿದ್ದ ಹಾವನ್ನು ವಶಕ್ಕೆ ಪಡೆದು ಮೂವರನ್ನು ಬಂಧಿಸಲಾಗಿದೆ. ಅವರು ನೀಡಿದ ಮಾಹಿತಿಯಂತೆ ಉಳಿದ ಇಬ್ಬರನ್ನೂ ಬಂಧಿಸಿ ವನ್ಯಜೀವಿ ಸುರಕ್ಷತೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.





