'ನಮಗೆ ವಿಷ ಕುಡಿಸಿ': ಮೈಸೂರು ಡಿಸಿ ಕಚೇರಿ ಎದುರು ರೈತರ ಧರಣಿ

ಮೈಸೂರು,ಡಿ.30: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೈಸೂರು ತಾಲೂಕು ವತಿಯಿಂದ ಪವರ್ ಗ್ರಿಡ್ ಬದಲಿಸಿ ಇಲ್ಲವೇ ನಮಗೆ ವಿಷ ಕುಡಿಸಿ ಎಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ವಿದ್ಯುತ್ ಲೈನ್ ತೆಗೆದುಕೊಂಡು ಹೋಗಲು ಪವರ್ ಗ್ರಿಡ್ ನವರಿಗೆ ಯಾವುದೇ ನೀತಿ ನಿಯಮ ರೂಪಿಸಿರುವ ಕಾಯ್ದೆಯೇ ಇಲ್ಲ. ಬ್ರಿಟಿಷ್ ಕಾಲದ ಟೆಲಿಗ್ರಾಫ್ ಆಕ್ಟ್‍ನ ಆಧಾರದ ಮೇಲೆ ಲಂಗು ಲಗಾಮು ಇಲ್ಲದೆ ವಿದ್ಯುತ್ ಪ್ರಸರಣದ ಮಾರ್ಗವನ್ನು ತೆಗೆದುಕೊಂಡು ಹೋಗುತ್ತ ರೈತರ ತೋಟ ಮನೆಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಈ ಸಂಬಂಧ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಲೇ ಬಂದಿವೆ ಎಂದರು.
ಮೈಸೂರು ತಾಲೂಕು, ಇಲವಾಲ ಹೋಬಳಿಗೆ ಸೇರಿದ ಯಾಚೇಗೌಡನ ಹಳ್ಳಿ, ಹೊಸಕೋಟೆ, ದೊಡ್ಡೇಗೌಡನ ಕೊಪ್ಪಲು, ಕಲ್ಲೂರು ನಾಗನಹಳ್ಳಿ, ಆನಂದೂರು, ಚಿಕ್ಕನಹಳ್ಳಿ, ಮೇಗಲಾಪುರ, ಹುಂಡಿವಾಡಿ, ಮೈದನಹಳ್ಳಿ ಮೂಲಕ ಹಿರಿಯೂರಿನಿಂದ ಮೈಸೂರು 440 ಕೆ.ವಿ ವಿದ್ಯುತ್ ಪ್ರಸರಣದ ಗೋಪುರಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ಗುರುತಿಸಿರುವ ಮಾರ್ಗ ಗುಂಗ್ರಾಲ್ ಛತ್ರ ಮೇಗಳಾಪುರ, ಮೈದನಹಳ್ಳಿಗಳನ್ನು ಒಳಗೊಂಡಂತೆ ಗುರುತಿಸಿರುತ್ತಾರೆ. ಆದರೆ ರಿಯಲ್ ಎಸ್ಟೇಟ್ ಮತ್ತು ಡೆವಲಪರ್ಸ್ ಒತ್ತಡಕ್ಕೆ ಮಣಿದು ಫಲವತ್ತಾದ ತೋಟಗಳ ಮೇಲೆ ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಬದುಕನ್ನು ಕಿತ್ತಕೊಳ್ಳಲು ಮುಂದಾಗಿದ್ದು ಇದನ್ನು ಪ್ರತಿಭಟಿಸಿ ಕಳೆದ ಒಂದೂವರೆ ವರ್ಷದಿಂದ ನಿಲ್ಲಿಸಲಾಗಿದೆ. ಆದರೆ ಪವರ್ ಗ್ರಿಡ್ ಪ್ರಯತ್ನ ಮುಂದುವರಿದಾಗ ನೊಂದ ರೈತರು ಮೈಸೂರು-ಕೊಡಗು ಸಂಸದರಲ್ಲಿ ಹೇಳಿಕೊಂಡಾಗ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾರ್ಗ ಬದಲಿಸುವ ಸಂಬಂಧ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ಥಳ ಪರಿಶೀಲನೆ ಮಾಡುವುದಾಗಿ ತಿಳಿಸಿ ಸಭೆಯನ್ನು ಮುಂದೂಡಲಾಗಿತ್ತು. ಆದರೆ ಪವರ್ ಗ್ರಿಡ್ ನವರು ಪೊಲೀಸ್ ರಕ್ಷಣೆಯಲ್ಲಿ ಅಳತೆ ಕಾರ್ಯ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ತೋಟಗಳ ಮೇಲೆಯೇ ಗೋಪುರಗಳನ್ನು ನಿರ್ಮಿಸಲು ತಯಾರಿ ನಡೆಸುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪಿವುದಿಲ್ಲ. ನಾವು ತೋಟಗಳನ್ನು ಕಳೆದುಕೊಳ್ಳುವುದಿಲ್ಲ. ಪವರ್ ಗ್ರಿಡ್ ಮಾರ್ಗ ಬದಲಿಸಿ ಇಲ್ಲವೇ ನಮಗೆ ವಿಷ ಕುಡಿಸಿ ಎಂದು ನಾವು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದರು.
ಇದೇ ವೇಳೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ರೈತರು 2020ರ ಗಣರಾಜೋತ್ಸವಕ್ಕೆ ಬ್ರೆಝಿಲ್ ಅಧ್ಯಕ್ಷ ಬೋಲ್ಸೇನಾರೋ ಅವರನ್ನು ಅತಿಥಿಯಾಗಿ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಪ್ರಧಾನಿ ಮೋದಿಯವರು ಕರೆಸಬಾರದು ಎಂದರು. ಈ ಕುರಿತು ಬಡಗಲಪುರ ನಾಗೇಂದ್ರ ಮಾತನಾಡಿ, ಕಬ್ಬು ಬೆಳೆಗಾರರ ವಿರುದ್ಧ ಜಿನೀವಾ ಕೋರ್ಟಿನಲ್ಲಿ ದಾವೆ ಹಾಕಿದ್ದಾರೆ. ಆಸ್ಟ್ರೇಲಿಯಾ, ಬ್ರೆಝಿಲ್, ಸೆಂಟ್ರಲ್ ಅಮೇರಿಕ ಕಬ್ಬು ಬೆಳೆಯುವ ಪ್ರದೇಶ. ಆದರೆ ಆ ದೇಶದ ಸಕ್ಕರೆಯನ್ನು ಉಪಯೋಗಿಸುವುದು ಕಡಿಮೆ. ನಮ್ಮ ದೇಶದ ಸಕ್ಕರೆ ಉಪಯೋಗಿಸುವುದೇ ಜಾಸ್ತಿ. ಕಬ್ಬು ಬೆಳೆಗಾರರ ವಿಚಾರದಲ್ಲಿ ಬೋಲ್ಸೆನಾರೋ ವಿರೋಧಿ ನೀತಿ ಅನುಸರಿಸುತ್ತಿದ್ದು ಕೂಡಲೇ ಅವರ ಆಹ್ವಾನವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಅಶ್ವಥ್ ನಾರಾಯಣ ರಾಜೇ ಅರಸ್, ಲೋಕೇಶ್ ರಾಜೇ ಅರಸ್, ಸರಗೂರು ನಟರಾಜು, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನೇತ್ರಾವತಿ, ಕರುಣಾಕರನ್, ಅಭಿರುಚಿ ಗಣೇಶ್, ಚಂದ್ರೇಗೌಡ, ಪಿ.ಮರಂಕಯ್ಯ, ಅನಂದೂರು ಪ್ರಭಾಕರ್, ನಾಗನಹಳ್ಳಿ ವಿಜೇಂದ್ರ, ಮಂಡಕಳ್ಳಿ ಮಹೇಶ್, ನಾಹನಹಳ್ಳಿ ಚಂದ್ರಶೇಖರ್, ದಿನೇಶ್, ರಾಘವೇಂದ್ರ ಚಿಕ್ಕನಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.







