ಅಗ್ರ ಸ್ಥಾನ ಕಾಯ್ದು ಕೊಂಡ ಕೊಹ್ಲಿ
ಐಸಿಸಿ ಟೆಸ್ಟ್ ಬ್ಯಾಟ್ಸ್ ಮನ್‌ಗಳ ರ‍್ಯಾಂಕಿಂಗ್

ಹೊಸದಿಲ್ಲಿ, ಡಿ.30: ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ, ಮಧ್ಯಮ ಸರದಿಯ ದಾಂಡಿಗ ಚೇತೇಶ್ವರ ಪೂಜಾರ ಹಿಂಭಡ್ತಿ ಪಡೆದಿದ್ದಾರೆ
ಭಾರತದ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ಸ್ ಮನ್‌ಗಳ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.
ಸೋಮವಾರ ಬಿಡುಗಡೆಗೊಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ 928 ಅಂಕಗಳೊಂದಿಗೆ ಕೊಹ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ಸ್ಮಿತ್ (911) ಮತ್ತು ನ್ಯೂಝಿಲ್ಯಾಂಡ್‌ನ ನಾಯಕ ಕೇನ್ ವಿಲಿಯಮ್ಸನ್ (822) ಗಿಂತ ಮುಂದಿದ್ದಾರೆ. ಸ್ಮಿತ್ ಮತ್ತು ವಿಲಿಯಮ್ಸನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಶೆನ್ ಈ ವರ್ಷ 11 ಟೆಸ್ಟ್ ಪಂದ್ಯಗಳಲ್ಲಿ 1,085 ರನ್ ಗಳಿಸಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 791 ಅಂಕಗಳೊಂದಿಗೆ ಪೂಜಾರ ಐದನೇ ಸ್ಥಾನದಲ್ಲಿದ್ದರೆ, ಬಾಬರ್ ಆಝಂ (737) ಆರನೇ ಸ್ಥಾನ ಪಡೆದಿದ್ದಾರೆ. ಭಾರತದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮತ್ತು ಆಸ್ಟ್ರೇಲಿಯದ ಡೇವಿಡ್ ವಾರ್ನರ್ 759 ಅಂಕಗಳೊಂದಿಗೆ ಜಂಟಿ ಏಳನೇ ಸ್ಥಾನ ಗಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 95 ರನ್ ಗಳಿಸಿ ದ.ಆಫ್ರಿಕಾದ ಗೆಲುವಿಗೆ ನೆರವಾಗಿದ್ದ ಕ್ವಿಂಟನ್ ಡಿ ಕಾಕ್ 712 ಅಂಕಗಳೊಂದಿಗೆ 10ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಬೌಲಿಂಗ್‌ನಲ್ಲಿ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದಾಗಿ 794 ಅಂಕಗಳೊಂದಿಗೆ ಆರನೇ ಸ್ಥಾನಕ್ಕೆ ಹಿಂಭಡ್ತಿ ಪಡೆದಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (772) ಮತ್ತು ವೇಗಿ ಮುಹಮ್ಮದ್ ಶಮಿ (771) ಕ್ರಮವಾಗಿ ಒಂಬತ್ತನೇ ಮತ್ತು ಹತ್ತನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ (902) ಅಗ್ರಸ್ಥಾನ, ನೀಲ್ ವ್ಯಾಗ್ನರ್ (859) ಎರಡನೇ ಮತ್ತು ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ (832)ಮೂರನೇ ಸ್ಥಾನದಲ್ಲಿದ್ದಾರೆ.







