ಪ್ರಾಥಮಿಕ ಹಂತದಿಂದಲೇ ಗುಣಾತ್ಮಕ ಶಿಕ್ಷಣ ಅಗತ್ಯ: ನ್ಯಾ.ನಾಗಮೋಹನ್‌ದಾಸ್

ಬೆಂಗಳೂರು, ಡಿ.30: ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೇ ಗುಣಾತ್ಮಕ ಶಿಕ್ಷಣ ನೀಡಬೇಕು ಹಾಗೂ ಸಂವಿಧಾನವನ್ನು ಅರ್ಥಮಾಡಿಸಬೇಕಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಹೇಳಿದ್ದಾರೆ.
ಸೋಮವಾರ ನಗರದ ಅಲ್ಯುಮ್ನಿ ಅಸೋಸಿಯೇಷನ್ ಹಾಲ್ ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ)ನ ಸಂಸ್ಥಾಪನಾ ದಿನಾಚರಣೆ ಮತ್ತು ಸುವರ್ಣ ಮಹೋತ್ಸವ ಆಚರಣೆ ಅಂಗವಾಗಿ ಆಯೋಜಿಸಿದ್ದ ಶಿಕ್ಷಣ: ಸರಕಾರಗಳ ಧೋರಣೆ-ವಿದ್ಯಾರ್ಥಿಗಳ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಮರೆಯಾಗುತ್ತಿದ್ದು, ವಿದ್ಯಾರ್ಥಿಗಳು ಅಂಕಗಳು ಬಂದರೆ ಸಾಕು ಎಂಬ ಸ್ಥಿತಿಗೆ ತಲುಪಿದ್ದೇವೆ. ಆಳುವ ಸರಕಾರಗಳು ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಸಮಗ್ರವಾದ ನೀತಿಗಳನ್ನು ರೂಪಿಸುತ್ತಿಲ್ಲ. ನಮ್ಮಲ್ಲಿ ಸ್ವಾತಂತ್ರ ಬಂದ ನಂತರ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಕಾನೂನು ಶಿಕ್ಷಣಕ್ಕೆ ಮಾನ್ಯತೆ ನೀಡಿಲ್ಲ ಎಂದು ನುಡಿದರು.
ಭಾರತದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ನೀಡುವ ಸಲುವಾಗಿ ಆಳುವ ಪ್ರಭುತ್ವಗಳು ಸರಿಯಾದ ಯೋಜನೆ ರೂಪಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ನಮ್ಮ ಸಂವಿಧಾನದಲ್ಲಿ ಜಾತಿ, ಧರ್ಮ, ಭಾಷೆ, ಪ್ರದೇಶ, ಲಿಂಗ ಎಂಬ ಭೇದ-ಭಾವವನ್ನು ಅನುಮೋದಿಸುವುದಿಲ್ಲ. ಆದರೆ, ಶಿಕ್ಷಣದ ವಿಚಾರದಲ್ಲಿ ಉಳ್ಳವರಿಗೆ, ಇಲ್ಲದವರಿಗೆ ಒಂದೊಂದು ರೀತಿಯಲ್ಲಿ ಶಿಕ್ಷಣ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಶಿಕ್ಷಣ ನೀತಿ ಸಮಂಜಸವಾದುದಲ್ಲ. ಅದರಲ್ಲಿ ಸಂವಿಧಾನದ ಆಶಯಗಳಿಗೆ ಬದ್ಧವಾಗುವ ಅಂಶಗಳಿಲ್ಲ ಎಂದ ಅವರು, ದೇಶದಲ್ಲಿ ಸಂವಿಧಾನವನ್ನು ಜಾರಿಗೊಳಿಸದೇ ಹೋದರೆ ಬಹುತ್ವ, ಕಲ್ಯಾಣ ರಾಜ್ಯ, ಪ್ರಜಾಪ್ರಭುತ್ವ, ಸಮಾನತೆ ಎಲ್ಲವೂ ನಾಶವಾಗಲಿದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ಸಂವಿಧಾನವನ್ನು ಓದಬೇಕು. ಆ ಮೂಲಕ ಕಾನೂನಿನ ಬಗೆಗೆ, ದೇಶದ ಐಕ್ಯತೆ, ಸಮಗ್ರತೆ, ಬಹುತ್ವದ ಬಗ್ಗೆ ಒಂದು ಸ್ಪಷ್ಟತೆ ಸಿಗಲಿದೆ. ಇತ್ತೀಚಿಗೆ ಯಾರೂ ಸಂವಿಧಾನ ಓದುತ್ತಿಲ್ಲ, ಓದಿದವರು ಅರ್ಥೈಸಿಕೊಂಡಿಲ್ಲ, ಅರ್ಥೈಸಿಕೊಂಡವರು ಜಾರಿ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಿಲ್ಲಿಯ ಜಾಮಿಯಾ ಮಿಲಿಯಾ ವಿವಿಯ ಸಂಶೋಧನಾ ವಿದ್ಯಾರ್ಥಿ ಇಬ್ರಾಹಿಂ ಕುಪಲತ್ ಮಾತನಾಡಿ, ದೇಶದಲ್ಲಿ ಅಧಿಕಗೊಂಡಿರುವ ಪ್ಯಾಶಿಸ್ಟ್ ಶಕ್ತಿಗಳಿಂದು ಸಂವಿಧಾನವನ್ನು ನಾಶ ಮಾಡಲು ಮುಂದಾಗಿದ್ದಾರೆ. ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವದ ವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೇಲೂ ಈ ಫ್ಯಾಶಿಸ್ಟ್ ಶಕ್ತಿಗಳು ನಿಯಂತ್ರಣ ಸಾಧಿಸುತ್ತಿವೆ ಎಂದು ಆಪಾದಿಸಿದರು.
ಕೇಂದ್ರ ಸರಕಾರವು ಜಾತಿ, ಧರ್ಮದ ಹೆಸರಿನಲ್ಲಿ ದೇಶ ವಿಭಜಿಸುವ ಉದ್ದೇಶದಿಂದ ಎನ್‌ಆರ್‌ಸಿ, ಸಿಎಎ ಅನ್ನು ಜಾರಿಗೆ ಮುಂದಾಗಿದೆ. ಪ್ರಧಾನಿ ಮೋದಿ ಗಲಾಟೆ ಮಾಡುವ ಎಲ್ಲರೂ ಮುಸ್ಲಿಮ್‌ರು ಎಂಬಂತೆ ಬಿಂಬಿಸುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಸಿಎಎ ಅನ್ನು ಬಲವಂತವಾಗಿ ಜನರ ಮೇಲೆ ಹೇರಲು ಮುಂದಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಎಫ್‌ಐನ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಕಾರ್ಯದರ್ಶಿ ಆರ್.ರಾಮಕೃಷ್ಣ, ಬಿ.ರಾಜಶೇಖರಮೂರ್ತಿ, ಹುಳ್ಳಿ ಉಮೇಶ್, ರಾಜ್ಯಾಧ್ಯಕ್ಷ ವಿ.ಅಂಬರೀಶ್, ಕಾರ್ಯದರ್ಶಿ ಗುರುರಾಜ್‌ದೇಸಾಯಿ ಉಪಸ್ಥಿತರಿದ್ದರು.
.jpg)







