ಪ್ರಿಯಾಂಕಾ ಗಾಂಧಿ ಲಕ್ನೋ ಭೇಟಿಯಲ್ಲಿ ಭದ್ರತೆ ಉಲ್ಲಂಘನೆಯಾಗಿಲ್ಲ: ಸಿಆರ್‌ಪಿಎಫ್
ಹೊಸದಿಲ್ಲಿ, ಡಿ. 30: ಇತ್ತೀಚೆಗೆ ಲಕ್ನೋಗೆ ಭೇಟಿ ನೀಡಿದ ಸಂದರ್ಭ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭದ್ರತೆ ಉಲ್ಲಂಘಿಸಲಾಗಿದೆ ಎಂಬ ಆರೋಪವನ್ನು ಕೇಂದ್ರ ಮೀಸಲು ಪಡೆ ಪೊಲೀಸರು (ಸಿಆರ್‌ಪಿಎಫ್) ಸೋಮವಾರ ನಿರಾಕರಿಸಿದ್ದಾರೆ.
ಆದರೆ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್. ದಾರಾಪುರಿ ಅವರನ್ನು ಭೇಟಿಯಾಗಲು ಸ್ಕೂಟರ್‌ನ ಹಿಂದೆ ಕುಳಿತು ತೆರಳುವ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಭದ್ರತಾ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಸಿಆರ್‌ಪಿಎಫ್ ಆರೋಪಿಸಿದೆ.
‘ಝಡ್’ ಭದ್ರತೆ ನೀಡಲಾದ ಸಿಆರ್‌ಪಿಎಫ್‌ಗೆ ಸೂಚನೆ ನೀಡದೆ ಪ್ರಿಯಾಂಕಾ ಗಾಂಧಿ ನಿಗದಿಯಾಗದ ಕಡೆ ಸಂಚರಿಸಲು ನಿರ್ಧರಿಸಿದ್ದರು. ಸಶಸ್ತ್ರ ಕಮಾಂಡೊಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭದ್ರತಾ ವ್ಯವಸ್ಥೆಯ ಒಂದು ಭಾಗವಾಗಿದೆ ಎಂದು ಸಿಆರ್‌ಪಿಎಫ್ ಹೇಳಿದೆ.
‘‘ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಯಾಣಿಸುವಾಗ ಭದ್ರತಾ ಅಧಿಕಾರಿ ಇಲ್ಲದೆ, ಗುಂಡು ನಿರೋಧಕವಲ್ಲದ ನಾಗರಿಕ ವಾಹನ ಬಳಸಿದ್ದಾರೆ. ಅವರು ಸ್ಕೂಟರ್ ಹಿಂದೆ ಕುಳಿತುಕೊಂಡು ಪ್ರಯಾಣಿಸಿದ್ದಾರೆ’’ ಎಂದು ಐಜಿ (ಬೇಹುಗಾರಿಕೆ ಹಾಗೂ ವಿಐಪಿ ಭದ್ರತೆ) ಪಿ.ಕೆ. ಸಿಂಗ್ ಸಹಿ ಹಾಕಿದ ಸಿಆರ್‌ಪಿಎಫ್ ಹೇಳಿಕೆ ತಿಳಿಸಿದೆ. ಇಂತಹ ಭದ್ರತಾ ಕೊರತೆಯನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ತಿಳಿಸಲಾಗಿತ್ತು. ಸೂಕ್ತ ಭದ್ರತಾ ವ್ಯವಸ್ಥೆ ಖಾತರಿಪಡಿಸುವಂತೆ ಸಲಹೆ ನೀಡಲಾಗಿತ್ತು ಎಂದು ಹೇಳಿಕೆ ತಿಳಿಸಿದೆ.







