ಹ್ಯೂಸ್ಟನ್ ಚರ್ಚ್‌ನಲ್ಲಿ ಗುಂಡು ಹಾರಾಟ
ಆರೋಪಿಯನ್ನು ಗುಂಡಿಟ್ಟು ಕೊಂದ ಭಕ್ತರು
ಹ್ಯೂಸ್ಟನ್, ಡಿ. 30: ಹ್ಯೂಸ್ಟನ್‌ನ ಚರ್ಚ್ ಒಂದರಲ್ಲಿ ರವಿವಾರ ಪ್ರಾರ್ಥನೆಯಲ್ಲಿ ನಿರತರಾಗಿದ್ದ ಜನರ ಮೇಲೆ ಗುಂಡು ಹಾರಿಸಿದ ವ್ಯಕ್ತಿಯೋರ್ವನನ್ನು ಅಲ್ಲಿನ ಭಕ್ತರೇ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ನಡೆಸಿದ ದಾಳಿಯಲ್ಲಿ ಓರ್ವ ಭಕ್ತ ಮೃತಪಟ್ಟಿದ್ದಾರೆ ಹಾಗೂ ಒಬ್ಬರು ಗಾಯಗೊಂಡಿದ್ದಾರೆ.
ವೈಟ್ ಸೆಟಲ್‌ಮೆಂಟ್‌ನಲ್ಲಿರುವ ಫೋರ್ಟ್ ವರ್ತ್ ಉಪನಗರದಲ್ಲಿರುವ ವೆಸ್ಟ್ ಫ್ರೀವೇ ಚರ್ಚ್ ಆಫ್ ಕ್ರೈಸ್ಟ್‌ನಲ್ಲಿ ರವಿವಾರ ಬೆಳಗ್ಗೆ ನಡೆದಿದೆ.
‘‘ಪ್ರಾರ್ಥನೆಯಲ್ಲಿ ನಿರತರಾಗಿದ್ದ ಇಬ್ಬರು ಭಕ್ತರು ಆರೋಪಿಯ ಮೇಲೆ ಪ್ರತಿ ಗುಂಡು ಹಾರಿಸಿದರು. ಆಗ ಆರೋಪಿಯು ಸ್ಥಳದಲ್ಲೇ ಮೃತಪಟ್ಟನು’’ ಎಂದು ವೈಟ್ ಸೆಟಲ್‌ಮೆಂಟ್ ಪೊಲೀಸರು ಸುದ್ದಿಗಾರರಿಗೆ ತಿಳಿಸಿದರು.
ಆರೋಪಿಯನ್ನು ಎದುರಿಸಲು ಭಕ್ತರು ತೋರಿಸಿದ ಧೈರ್ಯವನ್ನು ಪೊಲೀಸರು ಪ್ರಶಂಸಿಸಿದ್ದಾರೆ.
ಆತ್ಮಹತ್ಯೆ, ಹತ್ಯೆ, ಪೊಲೀಸರು ಹಾರಿಸುವ ಗುಂಡುಗಳು ಮತ್ತು ಆಕಸ್ಮಿಕವಾಗಿ ಹಾರುವ ಗುಂಡುಗಳು ಸೇರಿದಂತೆ ಅಮೆರಿಕದಲ್ಲಿ 2019ರಲ್ಲಿ ಗುಂಡು ತಗುಲಿ ಸತ್ತವರ ಸಂಖ್ಯೆ 36,000ವನ್ನು ದಾಟಿದೆ.





