ಅದು ಧರ್ಮಾಧಾರಿತ ಕಾನೂನಾಗಿರಲಿಲ್ಲ

ವಿವಿಧ ರಾಜಕೀಯ ಪಕ್ಷಗಳಿಂದ ವ್ಯಕ್ತವಾದ ಟೀಕೆಗೆ ಪ್ರತಿಕ್ರಿಯಿಸುತ್ತಾ ಪಿಟಿಐ ನ್ಯೂಸ್ ಏಜನ್ಸಿಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಮಹಾ ಕಾರ್ಯದರ್ಶಿ ರಾಮ್ ಮಾಧವ್‌ಹೇಳಿದರು: ನಾಗರಿಕ ಪೌರತ್ವ ತಿದ್ದುಪಡಿ ಮಸೂದೆ (ಸಿಟಿಜನ್ ಶಿಪ್ ಅಮೆಂಡ್‌ಮೆಂಟ್ ಬಿಲ್- ಕ್ಯಾಬ್) 1950ರಲ್ಲಿ ಜವಾಹರ ಲಾಲ್ ನೆಹರೂ ಅವರ ಸರಕಾರ ತಂದಿದ್ದ ಅಂತಹದ್ದೇ ಮಸೂದೆ. ಅಕ್ರಮ ವಲಸಿಗರನ್ನು ಅಸ್ಸಾಮಿನಿಂದ ಹೊರಗೆ ಕಳುಹಿಸುವುದೇ ಈ ಮಸೂದೆಯ ಉದ್ದೇಶವಾಗಿತ್ತು. ಆದರೆ ಅದು ಪೂರ್ವ ಪಾಕಿಸ್ತಾನ (ಈಗ ಬಾಂಗ್ಲಾದೇಶ)ದ ಅಲ್ಪಸಂಖ್ಯಾತರಿಗೆ ಅನ್ವಯವಾಗದ ಮಸೂದೆಯಾಗಿತ್ತು ಎಂಬುದನ್ನು ನಾವು ಗಮನಿಸಬೇಕಾಗಿದೆ.
ಆದರೆ ಆ ಹಳೆಯ ಮಸೂದೆಯ ಪರಾಮರ್ಶೆ ಮಾಡಿದಾಗ ಕೆಲವು ಸತ್ಯ ಸಂಗತಿಗಳು ಗೋಚರಿಸುತ್ತವೆ. ಆ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದಾಗ ನಡೆದ ಚರ್ಚೆಗಳು ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಆ ಚರ್ಚೆಗಳ ಪತ್ರಿಕಾ ವರದಿಯನ್ನು ಗಮನಿಸಿದಾಗಲೂ ರಾಮ್ ಮಾಧವ್ ಈಗ ಹೇಳಿರುವುದಕ್ಕಿಂತ ವಾಸ್ತವ ಭಿನ್ನವಾಗಿದೆ ಎಂಬುದು ತಿಳಿದು ಬರುತ್ತದೆ.
ಈ ಮಸೂದೆಯ ಪ್ರಕಾರ ಯಾರನ್ನು ಹೊರಗೆ ಕಳುಹಿಸಲಾಗುತ್ತದೆ ಅಥವಾ ಯಾರ್ಯಾರಿಗೆ ಅದರಿಂದ ವಿನಾಯಿತಿ ಇದೆ; ಯಾರು ಅದರ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಹೇಳುವಾಗ ಮಸೂದೆಯು ಅವರ ಧರ್ಮವನ್ನು ಉಲ್ಲೇಖಿಸಿರಲಿಲ್ಲ. ಬದಲಾಗಿ ಅದು ಎಲ್ಲ ‘ಅನಪೇಕ್ಷಿತ’ ವಿದೇಶೀಯರಿಗೆ ಅನ್ವಯವಾಗುತ್ತದೆ ಎಂದಷ್ಟೇ ಹೇಳಲಾಗಿತ್ತು. ಅದೇ ವೇಳೆ ಮಸೂದೆಯಲ್ಲಿ ನಿರಾಶ್ರಿತರಿಗೆ ಮತ್ತು ಪೂರ್ವಪಾಕಿಸ್ತಾನದಿಂದ ಭಯ ಹಾಗೂ ಹಿಂಸೆಯಿಂದಾಗಿ ದೇಶ ತ್ಯಜಿಸಿ ಬರುವವರಿಗೆ ರಕ್ಷಣೆಯನ್ನು ನೀಡಲಾಗಿತ್ತು. ವಲಸಿಗರನ್ನು (ಅಸ್ಸಾಮಿನಿಂದ) ಹೊರಗೆ ಕಳುಹಿಸುವ ಕಾಯ್ದೆಗೆ ಸಂಬಂಧಿಸಿ ರಾಮ ಮಾಧವ್ ತನ್ನ ಹೇಳಿಕೆ ನೀಡಿದ್ದಾರೆ. ಆ ಕಾಯ್ದೆಯು ಅಸ್ಸಾಮಿಗೆ ಬಂದು ಭಾರತದ ಬೇರೆ ಬೇರೆ ಭಾಗಗಳಲ್ಲಿ ವಾಸಿಸುತ್ತಿದ್ದ ಕೆಲವು ವಲಸಿಗರನ್ನು ಭಾರತದಿಂದ ಹೊರಗೆ ಕಳುಹಿಸುವ ಬಗ್ಗೆ ಕ್ರಮ ನಿಯಮಗಳನ್ನು ಉಲ್ಲೇಖಿಸಿತ್ತು. ಅವರು ದೇಶದಲ್ಲಿ ಉಳಿಯುವುದು ‘‘ಭಾರತದ ಸಾಮಾನ್ಯ ಜನತೆಯ (ಜನರಲ್ ಪಬ್ಲಿಕ್) ಹಿತಾಸಕ್ತಿಗೆ ಮಾರಕ’’ವೆಂದು ಅಂದಿನ ಕೇಂದ್ರ ಸರಕಾರ ಭಾವಿಸಿತ್ತು. 1950ರ ಜನವರಿ 7ರಂದು ಕೇಂದ್ರ ಸರಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯ ಮುಂದುವರಿಕೆಯಾಗಿ ಒಂದು ತಿಂಗಳ ಬಳಿಕ ಸಂಸತ್ತಿನಲ್ಲಿ ಚರ್ಚೆ ನಡೆದ ನಂತರ ಅಂದಿನ ಮಸೂದೆ ಕಾಯ್ದೆಯಾಗಿ ಜಾರಿಗೊಂಡಿತ್ತು. ಮಸೂದೆಯ ಕುರಿತು ಚರ್ಚೆ ವೇಳೆ, ಆ ಮಸೂದೆಯನ್ನು ಮಂಡಿಸಿದ್ದ ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಹೀಗೆ ಹೇಳಿದ್ದರು: ಪೂರ್ವ ಬಂಗಾಲದಿಂದ ಬರುವ ನಿರಾಶ್ರಿತರಿಗೆ ಅನ್ವಯಿಸುವುದು ಈ ಮಸೂದೆಯ ಉದ್ದೇಶವಲ್ಲ. ಚರ್ಚೆ ವೇಳೆ ಕೆಲವು ಸದಸ್ಯರು, ವಿಶೇಷವಾಗಿ ದೇಶದ ವಿಭಜನೆಯಿಂದ ಅತ್ಯಂತ ಹೆಚ್ಚು ಯಾತನೆಗೊಳಗಾಗಿದ್ದ ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಸದಸ್ಯರು ‘ಹಿಂದೂ ನಿರಾಶ್ರಿತ’ರನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಒತ್ತಾಯಿಸಿದ್ದರು.
ಆ ಸದಸ್ಯರ ಅಹವಾಲುಗಳಿಗೆ ಪ್ರತಿಕ್ರಿಯೆಯಾಗಿ ಒಂದು ದಿನದ ಬಳಿಕ ಮಸೂದೆಗೆ ಸೆಕ್ಷನ್ 2 (ಬಿ)ಯನ್ನು ಸೇರಿಸಲಾಯಿತು. ಅದರ ಪ್ರಕಾರ ‘‘ಈಗ ಪಾಕಿಸ್ತಾನದ ಭಾಗವಾಗಿರುವ ಯಾವುದೇ ಪ್ರದೇಶದಲ್ಲಿ ನಾಗರಿಕ ಅಶಾಂತಿ ಅಥವಾ ಭಯದಿಂದಾಗಿ ತನ್ನ ವಾಸಸ್ಥಾನವನ್ನು ತೊರೆದು ತರುವ ಅಸ್ಸಾಮಿನಲ್ಲಿ ವಾಸಿಸುತ್ತಿರುವ ವ್ಯಕ್ತಿಗೆ’’ ಕಾಯ್ದೆಯು ಅನ್ವಯವಾಗುವುದಿಲ್ಲ ಎಂದು ಸೆಕ್ಷನ್ 2 (ಬಿ) ಹೇಳುತ್ತದೆ.
ಆದ್ದರಿಂದ ಆ ಕಾಯ್ದೆಯು ನಾಗರಿಕ ಅಶಾಂತಿ ಅಥವಾ ಅದರ ಭಯದಿಂದಾಗಿ ಪಾಕಿಸ್ತಾನ ಬಿಟ್ಟು ಹೊರಗೆ ಹೋಗುವ ವ್ಯಕ್ತಿಗೆ ಅನ್ವಯವಾಗುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿತ್ತು. ಅಂದಿನ ಪೂರ್ವ ಪಾಕಿಸ್ತಾನಕ್ಕೆ ಕೂಡ. ಅಂದರೆ ಅಲ್ಲಿಂದ ದೇಶ ಬಿಟ್ಟು ತೆರಳುವ ವಲಸಿಗರಿಗೆ ಕೂಡ ಅದು ಅನ್ವಯವಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
1950ರ ಫೆಬ್ರವರಿ 13ರಂದು ಆ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರೆಯಿತು. ಕುತೂಹಲದ ವಿಷಯವೆಂದರೆ ಬಿಹಾರದ ಓರ್ವ ಸಂಸತ್ ಸದಸ್ಯರಾಗಿದ್ದ ತಾಜುಮುಲ್ ಹುಸೈನ್ ಮಸೂದೆಯ ಚರ್ಚೆ ವೇಳೆ ಹೇಳಿದ ಮಾತುಗಳು ‘ದಿ ಹಿಂದೂ’ ಪತ್ರಿಕೆಯಲ್ಲಿ ವರದಿಯಾದಂತೆ ಹೀಗಿವೆ: ಅಕ್ರಮ ವಲಸಿಗರನ್ನು ದೇಶದಿಂದ ಹೊರಗೆ ಕಳುಹಿಸುವುದಕ್ಕೆ ಮಸೂದೆ ಅವಕಾಶ ಮಾಡಿಕೊಡುತ್ತದೆ. ಆದರೆ ಅವರು ಮುಸ್ಲಿಮರೆಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಅವರು ದೇಶದ ನಾಗರಿಕರಲ್ಲ ಎಂಬ ಕಾರಣಕ್ಕಾಗಿ. ಆದ್ದರಿಂದ ‘‘ಮಸೂದೆ ರಾಷ್ಟ್ರದ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುವುದಿಲ್ಲ.’’
ಕೃಪೆ: ದಿ ಹಿಂದೂ







