ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಗಂಭೀರ್ ಅರ್ಹರಾಗಿಲ್ಲ: ಡಿಡಿಸಿಎ

ಹೊಸದಿಲ್ಲಿ, ಡಿ.30: ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಗೌತಮ್ ಗಂಭೀರ್ ದಿಲ್ಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಅರ್ಹರಾಗಿಲ್ಲ ಎಂದು ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಪ್ರಧಾನ ಕಾರ್ಯದರ್ಶಿ ವಿನೋದ್ ತಿಹಾರಾ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಅಸೆಂಬ್ಲಿ ಚುನಾವಣೆಯು ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯುತ್ತಿರುವ ಕಾರಣ ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಮತ್ತಷ್ಟು ಸಮಯಾವಕಾಶ ನೀಡುವಂತೆ ಡಿಡಿಸಿಎ ವಿನಂತಿಸಿಕೊಂಡಿದೆ.
ಭಾರತದ ಮಾಜಿ ಆರಂಭಿಕ ಆಟಗಾರ ಗಂಭೀರ್ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ. ಆದರೆ ಲೋಧಾ ಸಮಿತಿಯ ಶಿಫಾರಸಿನ ಅನ್ವಯ ಅವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಅನರ್ಹರಾಗಿದ್ದಾರೆ.
ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಲು ಸಮಯಾವಕಾಶ ನೀಡುವಂತೆ ಒಂಬುಡ್ಸ್ ಮನ್ ದೀಪಕ್ ವರ್ಮಾ ಮನವಿ ಮಾಡಿದ್ದಾರೆ. ಚುನಾವಣೆಯು ಜನವರಿ ಅಂತ್ಯಕ್ಕೆ ನಿಗದಿಯಾಗಿದೆ.ಆದರೆ, ದಿಲ್ಲಿ ಅಸೆಂಬ್ಲಿ ಚುನಾವಣೆಯ ಬಳಿಕ ನಡೆಸುವಂತೆ ಕೋರಿಕೆ ಸಲ್ಲಿಸಲಾಗಿದೆ ಎಂದು ಡಿಡಿಸಿಎ ಪ್ರಧಾನ ಕಾರ್ಯದರ್ಶಿ ವಿನೋದ್ ತಿಹಾರಾ ಹೇಳಿದ್ದಾರೆ.
ರಜತ್ ಶರ್ಮಾ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಗಂಭೀರ್ ಅಭ್ಯರ್ಥಿಯಾಗಲಿದ್ದಾರೆಂಬ ಸುದ್ದಿಗೆ ಪ್ರತಿಕ್ರಿಯಿಸಿದ ತಿಹಾರಾ, ದಿಲ್ಲಿ ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸುವುದಕ್ಕೆ ಗಂಭೀರ್‌ಗೆ ಸ್ವಾಗತವಿದೆ. ಆದರೆ ಅವರು ಸಂಸತ್ ಸ್ಥಾನವನ್ನು ತ್ಯಜಿಸಿದರೆ ಮಾತ್ರ ಅಧ್ಯಕ್ಷರಾಗಲು ಸಾಧ್ಯ ಎಂದರು.







