ಎಲ್ಲ ರೈಲು ಬೋಗಿಗಳಿಗೆ ಸಿಸಿಟಿವಿ ಕ್ಯಾಮರಾ!
ಹೊಸದಿಲ್ಲಿ, ಡಿ.31: ರೈಲುಗಳಲ್ಲಿ ಅಪರಾಧ ಕೃತ್ಯ ಮತ್ತು ಕಿಡಿಗೇಡಿ ಕೃತ್ಯಗಳನ್ನು ತಡೆಯುವ ಪ್ರಯತ್ನವಾಗಿ ಎಲ್ಲ ಎಕ್ಸ್ಪ್ರೆಸ್ ಮತ್ತು ಮೇಲ್ ರೈಲುಗಳ 58600 ಬೋಗಿಗಳಿಗೆ 2022ರ ಕೊನೆಯ ಒಳಗಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ.
ಅಪರಾಧಿಗಳನ್ನು ಪತ್ತೆ ಮಾಡಿ ಹಿಡಿಯುವ ಸಲುವಾಗಿ ರೈಲ್ವೆ ಇಲಾಖೆ ಕೃತಕ ಬುದ್ಧಿಮತ್ತೆ ಮತ್ತು ಮುಖ ಗುರುತಿಸುವಿಕೆ ಸಾಫ್ಟ್ವೇರ್ ಕೂಡಾ ಅಳವಡಿಸಿಕೊಳ್ಳಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾವುದೇ ರೈಲು ಅಪಘಾತಗಳಲ್ಲಿ ಪ್ರಯಾಣಿಕರು ಮೃತಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ರೈಲ್ವೆ ಇಲಾಖೆ ಆರ್ಥಿಕವಾಗಿ ತೀರಾ ಸಂಕಷಟದಲ್ಲಿದೆ ಎಂದು ಒಪ್ಪಿಕೊಂಡ ಅವರು, ರೈಲುಗಳ ಕಾರ್ಯಾಚರಣೆ ಅನುಪಾತ ಈ ವರ್ಷ ಶೇಕಡ 121ಕ್ಕೆ ಹೆಚ್ಚಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು ಶೇಕಡ 113ರಷ್ಟಿತ್ತು ಎಂದು ಅವರು ವಿವರಿಸಿದ್ದಾರೆ.
"ರೈಲು ಬೋಗಿಗಳ ಕಾರಿಡಾರ್ ಮತ್ತು ಬಾಗಿಲಿನ ಮೇಲೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು. ಆದರೆ ಪ್ರಯಾಣಿಕರ ಖಾಸಗೀತನಕ್ಕೆ ಯಾವುದೇ ಧಕ್ಕೆ ಇಲ್ಲ. 2022ರ ಮಾಚ್ ಒಳಗಾಗಿ ಎಲ್ಲ 6100 ರೈಲು ನಿಲ್ದಾಣಗಳಿಗೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.