ಮೆಲ್ಕಾರ್ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ

ಬಂಟ್ವಾಳ, ಡಿ. 31: ಸ್ವಚ್ಛ ಮನಸು ಹಾಗೂ ಸ್ವಸ್ಥ ಮನಸಿನಿಂದ ಸಾಮಾಜಿಕ ಸೌಹಾರ್ದತೆ ಮತ್ತು ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ, ಇದಕ್ಕೆ ಸುಧಾರಿತ ಕಲಿಕಾ ಕ್ರಮ ಪೂರಕ ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಯಡಪಡಿತ್ತಾಯ ಹೇಳಿದ್ದಾರೆ.
ಮಂಗಳೂರು ಎಜುಕೇಶನ್ ಎನ್‍ಹ್ಯಾನ್ಸ್ ಮೆಂಟ್ ಟ್ರಸ್ಟ್ ನಡಿ ಸಜೀಪ ಮುನ್ನೂರಿನ ಮಾರ್ನಬೈಲ್‍ನಲ್ಲಿ ಕಾರ್ಯಾಚರಿಸುತ್ತಿರುವ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ 11ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಠ್ಯಕ್ರಮವನ್ನು ಮೀರಿ ಚಿಂತಿಸಬೇಕಾಗುತ್ತದೆ. ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದವರು, ಈ ಕಾಲಘಟ್ಟದಲ್ಲಿ ಇಂತಹ ಸುಧಾರಿತ ಶಿಕ್ಷಣ ಕ್ರಮಗಳು ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಕೌಶಲ್ಯವನ್ನು ವೃದ್ಧಿಸುತ್ತವೆ. ಮುಂದೆ ಅವರ ಉದ್ಯೋಗ ಜೀವನದಲ್ಲಿಯೂ ಈ ಕ್ರಮಗಳು ಸಹಕಾರಿ ಎಂದು ಅವರು ಹೇಳಿದರು.
ವಿವಿಧ ವಿಷಯಗಳ ಬಗ್ಗೆ ಹೆಚ್ಚೆಚ್ಚು ಪ್ರಶ್ನೆಗಳನ್ನು ಕೇಳುವ ಮನೋಭಾವನೆ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಶೇ. 90ರಷ್ಟು ಶಿಕ್ಷಣ ಸಂಸ್ಥೆ ಸಹಿತ ವಿದ್ಯಾರ್ಥಿಗಳು ಉದ್ಯೋಗಧಾರಿತ ಶಿಕ್ಷಣ ಮುಖ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಪೋಷಕರು ತಮ್ಮ ಮಕ್ಕಳನ್ನು ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಶಿಕ್ಷಣ ಕೇವಲ ಉದ್ಯೋಗಕ್ಕಾಗಿಯೇ ಸೀಮಿತವಾಗಿರ ಬಾರದು. ಬದಲಾಗಿ ಸಮಾಜದ ಅಭಿವೃದ್ಧಿಗೂ ನಮ್ಮ ಕೊಡುಗೆ ನೀಡಬೇಕಾಗಿದೆ ಎಂದು ಪ್ರೊ. ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ಏನಾದರೂ ಸಮಸ್ಯೆಗಳು ಎದುರಾದಾಗ ನಾವು ಕಾಲ ಕೆಟ್ಟದಾಗಿದೆ ಎಂದು ಹೇಳುತ್ತೇವೆ. ಆದರೆ, ಕಾಲ ಕೆಟ್ಟದಾಗಿಲ್ಲ. ಮನುಷ್ಯರ ಮನಸ್ಥಿತಿ ಬದಲಾವಣೆಯಾಗಿದೆ ಅಷ್ಟೇ. ಮೊದಲು ನಾವು ಬದಲಾಗುವುದರ ಜೊತೆಗೆ ಇನ್ನೊಬ್ಬರನ್ನು ಬದಲಾಯಿಸುವ ಪ್ರವೃತ್ತಿಯನ್ನು ಬೆಳೆಸಬೇಕಾಗಿದೆ. ನಾಳೆ, ಎನ್ನುವುದನ್ನು ಬಿಟ್ಟು ಇಂದೇ ಮಾಡು ಎನ್ನುವವರು ನಾವಾಗಬೇಕು ಎಂದ ಅವರು, ಎಲ್ಲ ಧರ್ಮದಲ್ಲಿಯೂ ಶಿಕ್ಷಣಕ್ಕೆ ಆಧ್ಯತೆ ನೀಡಿದೆ. ಶಿಕ್ಷಣ ಎಲ್ಲ ಕ್ಷೇತ್ರಗಳ ಆಧಾರ ಸ್ತಂಭವಾಗಿದೆ. ಶಿಕ್ಷಣದಿಂದ ದೇವರು ಒಲಿಯುತ್ತಾನೆ. ಈ ಸ್ವರ್ಧಾತ್ಮಕ ಯುಗದಲ್ಲಿ ಸಿಗುವ ಅವಕಾಶವನ್ನು ಉಪಯೋಗಿಸಬೇಕು. ಜೀವನದಲ್ಲಿ ಅವಕಾಶಗಳು ಮತ್ತೆ ಮತ್ತೆ ಬಾರದು ಎಂದು ಅವರು ಹೇಳಿದರು.
ಮೊದಲು ದೇವರು, ನಂತರ ನೀವು, ಪೋಷಕರು, ಸಮಾಜ ಕೊನೆಯದಾಗಿ ದೇಶ. ವಿವಿಧತೆಯಲ್ಲಿ ಏಕತೆ ಸಾರುವ ದೇಶ ನಮ್ಮದಾಗಿದ್ದು, ತಮ್ಮ ಧರ್ಮವನ್ನು ಪ್ರೀತಿಸುವುದರ ಜೊತೆ ಇನ್ನೊಂದು ಧರ್ಮವನ್ನು ಅರಿಯುವ ಮತ್ತು ಗೌರವಿಸುವ ಕಾರ್ಯ ವಾಗಬೇಕಾಗಿದೆ. ಧರ್ಮ, ದೇಶದ ಬಗ್ಗೆ ಧನಾತ್ಮಕವಾಗಿ ಚಿಂತನೆ ಮಾಡಬೇಕಾಗಿದೆ. ಇನ್ನೊಂದು ಧರ್ಮದ ಬಗ್ಗೆ ನಕಾರಾತ್ಮಕ ಭಾವನೆ ಬೇಡ. ಇಂತಹ ವಿಷಯಗಳ ಜೊತೆಗೆ ಮಾನವೀಯತೆ ಮೌಲ್ಯಯುತ ಶಿಕ್ಷಣವನ್ನು ಸಂಸ್ಥೆ ನೀಡುಬೇಕಾಗಿದೆ. ಆದರೆ, ಇಂತಹ ಶಿಕ್ಷಣವು ವಿದ್ಯಾ ಸಂಸ್ಥೆಗಳು ನೀಡದಿರುವ ಬಗ್ಗೆ ನೋವಿದೆ ಎಂದ ಅವರು, ವಿದ್ಯಾರ್ಥಿಗಳು ಸಮಾಜಮುಖಿಯಾದ ಚಿಂತನೆಯೊಂದಿಗೆ ಬಲಿಷ್ಟವಾದ ಭಾರತವನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಧಾರ್ಮಿಕ ಆಚಾರ, ವಿಚಾರದಲ್ಲಿ ಮನೆ, ಮನಸಿನಲ್ಲಿರಲಿ. ಹೊರಗಡೆ ಬಂದಾಗ ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿರ ಬೇಕು. ಬೇಲಿಯು ಹೊಲವನ್ನು ಕಾಯಲು ಅಶಕ್ತರಾದಾಗ ನಾವು ಹೊಲವನ್ನು ಕಾಯುವ ಬದಲು ಬೇಲಿಯನ್ನು ಕಿತ್ತೊಗೆಯ ಬೇಕೆಂದ ಅವರು, ಒಂದರ ಅಂತಿಮವೇ ಇನ್ನೊಂದರ ಆರಂಭ. ಸತ್ತ ಮೇಲೂ ನಮ್ಮನ್ನು ಸಮಾಜ ಗುರುತಿಸಬೇಕಾಗಿದೆ ಎಂದರು.
ಏಕಾಗೃತೆಯಿಂದ ದೇವರ ಜ್ಞಾನ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಕೆಡುಕುಗಳಿಂದ ದೂರವಾಗಬಹುದು. ಆಯಾ ದಿನದ ಕಾರ್ಯ ಚಟುವಟಿಕೆಗಳ ಬಗ್ಗೆ ಆತ್ಮಶೋಧನೆ ಮಾಡಬೇಕಾಗಿದೆ ಎಂದ ಅವರು, ಕ್ರೀಡೆಯಿಂದ ಆರೋಗ್ಯ ಸಮಾಜ ನಿಮಾಣ ಸಾಧ್ಯ ಎಂದು ಅವರು ಹೇಳಿದರು.
ಯೆನೆಪೋಯ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪರ್ಹಾದ್ ಯೆನೆಪೋಯ ಮುಖ್ಯ ಅತಿಥಿಗಳಾಗಿ ಮಾತನಾಡಿ, ನಿರಂತರ ಪರಿಶ್ರಮದಿಂದ ಯಶಸು ಸಾಧ್ಯ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರಲ್ಲೂ ವಿಶೇಷವಾದ ಪ್ರತಿಭೆಗಳಿವೆ. ತಮ್ಮಲ್ಲಿ ಹುದುಗಿರುವ ಕೌಶಲವನ್ನು ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುವ ಮೂಲಕ ಜಗತ್ತಿಗೆ ತಿಳಿಸಬೇಕಾಗಿದೆ. ಪ್ರತಿಭೆಯನ್ನು ಕೇವಲ ಸ್ಪರ್ಧೆಗೆ ಸೀಮಿತಗೊಳಿಸದರಿ. ಸಾಧ್ಯವಾದಷ್ಟು ಅದನ್ನು ಅಭಿವೃದ್ಧಿ ಪಡಿಸುವ ಮೂಲಕ ಹೊಸ ಚಿಂತನೆ ಹಾಗೂ ಕಲ್ಪನೆಯೊಂದಿಗೆ ಸಮಾಜಕ್ಕೆ ಪ್ರಸ್ತುತಪಡಿಸಿ ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಕಟ್ಟಡದಿಂದ ಪ್ರಾರಂಭವಾದ ಈ ವಿದ್ಯಾ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದ್ದು, ಟ್ರಸ್ಟ್ ನ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಮಂಗಳೂರು ಎಜುಕೇಶನ್ ಎನ್‍ಹ್ಯಾನ್ಸ್ ಮೆಂಟ್ ಟ್ರಸ್ಟ್ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಮಾತನಾಡಿ, ಈ ಸಂಸ್ಥೆಯು ಮೌಲ್ಯಯುತ ಶಿಕ್ಷಣದೊಂದಿಗೆ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಿದೆ. ಇಂತಹ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಪೋಷಕರು ಕೂಡಾ ಭಾಗವಹಿಸಬೇಕು. ಇಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದು, ಇನ್ನು ಕೆಲವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇವಲ ಮನೆಯಲ್ಲಿ ಕುಳಿತುಕೊಳ್ಳುವುದಕ್ಕಾಗಿ ಶಿಕ್ಷಣ ಪಡೆಯಬೇಡಿ. ಕುಟುಂಬವನ್ನು ಮುನ್ನಡೆಸಲು ನೀವು ಒಂದು ಭಾಗವಾಗಬೇಕು. ಗ್ರಾಮೀಣ ಪ್ರದೇಶದಲ್ಲಿಯೇ ಪ್ರತಿಭಾನ್ವಿತ ಮಕ್ಕಳಿದ್ದು, ನಮ್ಮ ಸಂಸ್ಥೆಯು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಲೌಖಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವೂ ಕಾಲದ ಅಗತ್ಯವಾಗಿದ್ದು, ಈ ಭಾಗದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಸ್ಥೆ ಪಣತೊಟ್ಟಿದ್ದು, ಕಲಿಕೆಗೆ ಪೂರಕ ವಾತಾವರಣ ನೀಡುವಲ್ಲಿ ಸಂಸ್ಥೆ ಬದ್ಧವಾಗಿದೆ ಎಂದ ಅವರು, ಸಂಸ್ಥೆ ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿದರು.
ಕಾಲೇಜಿನ ಪ್ರಾಂಶುಪಾಲ ಬಿ.ಕೆ. ಅಬ್ದುಲ್ ಲತೀಫ್ ವಾರ್ಷಿಕ ವರದಿ ವಾಚಿಸಿದರು. ಪ್ರಸಕ್ತ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಪಪ್ರಾಂಶುಪಾಲೆ ಸುನೀತಾ ಪೆರೇರಾ, ಮುಹಮ್ಮದ್ ಶಿಬಾಬ್ ಬಹುಮಾನಗಳ ಪಟ್ಟಿ ವಾಚಿಸಿದರು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಫಾತಿಮಾ ಜುಮಾನ ಸ್ವಾಗತಿಸಿ, ಫಾತಿಮಾ ಸುಆದಾ ವಂದಿಸಿ, ಶಾಹಿನಾ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.






.jpg)
.jpg)
.jpg)
.jpg)
.jpg)




