'ಡಿಸಿಎಂ ಹುದ್ದೆ ರದ್ದು' ಬಗ್ಗೆ ಉಪಮುಖ್ಯಮಂತ್ರಿ ಕಾರಜೋಳ ಸ್ಪಷ್ಟನೆ

ಬೆಂಗಳೂರು, ಡಿ. 31: ಉಪಮುಖ್ಯಮಂತ್ರಿ ಹುದ್ದೆ ರದ್ದುಗೊಳಿಸುವ ಸಂಬಂಧ ಪಕ್ಷ ಮತ್ತು ಸರಕಾರದ ಮಟ್ಟದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಬದಲಿಗೆ ರಸ್ತೆಗಳ ಮೇಲೆ ಚರ್ಚೆಯಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹುದ್ದೆ ಸಂಬಂಧ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಯುತ್ತದೆ. ಅದಕ್ಕೆ ತನ್ನದೆ ಆದ ಗೌರವವಿದೆ. ನನಗಿರುವ ಮಾಹಿತಿ ಪ್ರಕಾರ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.
ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಚರ್ಚಿಸಿದರೆ ಅದಕ್ಕೆ ಗೌರವವಿದೆ. ಅದು ಬಿಟ್ಟು ಹಾದಿ-ಬೀದಿಯಲ್ಲಿ ಚರ್ಚೆ ಮಾಡಿದರೆ ಅದಕ್ಕೆ ಯಾವುದೇ ಗೌರವ ಇರುವುದಿಲ್ಲ. ಯಾರ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು, ಬೆಲೆ ಕೊಡಬಾರದು ಎಂದು ನನಗೆ ಗೊತ್ತಿದೆ ಎಂದು ಕಾರಜೋಳ ಹೇಳಿದರು.
ನಾನು ಎಂದೂ ಯಾವುದೇ ಹುದ್ದೆಗೆ ಜೋತು ಬೀಳುವ ವ್ಯಕ್ತಿಯಲ್ಲ. ಪಕ್ಷ ಏನು ಮಾಡಬೇಕೆಂದು ತೀರ್ಮಾನಿಸಲಿದೆ. ಅದಕ್ಕೆ ನಾನು ಬದ್ಧ. ಯಾರೇ ಆದರೂ ಪಕ್ಷದ ಮಿತಿಯನ್ನು ಅರಿತು ಮಾತನಾಡಬೇಕು ಎಂದು ಗೋವಿಂದ ಕಾರಜೋಳ ಇದೇ ವೇಳೆ ಸಲಹೆ ಮಾಡಿದರು.
ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ತೀರ್ಮಾನ ಮಾಡುವವರು ಮುಖ್ಯಮಂತ್ರಿ ಯಡಿಯೂರಪ್ಪ. ಪಕ್ಷದ ರಾಷ್ಟ್ರೀಯ ಮುಖಂಡರು ಹಾಗೂ ಸಂತೋಷ್ ಈ ಕುರಿತು ಚರ್ಚಿಸಿದರೆ ಅದಕ್ಕೆ ಬೆಲೆ ಇರುತ್ತದೆ. ಉಳಿದವರು ಏನೇ ಹೇಳಿದರೂ ಅದಕ್ಕೆ ಬೆಲೆ ಇಲ್ಲ ಎಂದು ತಿರುಗೇಟು ನೀಡಿದರು.







