ಮದ್ಯದಂಗಡಿ ಪರವಾನಗಿ ಪ್ರಸ್ತಾವನೆ ತಿರಸ್ಕಾರ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ

ಬೆಂಗಳೂರು, ಡಿ.31: ಎನ್‌ಜಿಇಎಫ್ ಲೇಔಟ್‌ನ ಸದಾನಂದನಗರದಲ್ಲಿ ಮದ್ಯದಂಗಡಿ ಪರವಾನಿಗೆಯ ಪ್ರಸ್ತಾವನೆಯನ್ನು ಬಿಬಿಎಂಪಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಸದಾನಂದನಗರದ ನಿವಾಸಿ ಎ.ಕೃಷ್ಣಮೂರ್ತಿ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಮೆಟ್ರೋ ರೈಲು ವಿಸ್ತರಣೆ ಕಾಮಗಾರಿಗಾಗಿ ಬೆಂಗಳೂರಿನ ರಿಂಗ್ ರಸ್ತೆಯ ಇಬ್ಬಲೂರಿನಲ್ಲಿದ್ದ ಸಿಎಲ್-2 ಮದ್ಯದಂಗಡಿಯನ್ನು ಸದಾನಂದನಗರಕ್ಕೆ ಸ್ಥಳಾಂತರಕ್ಕೆ ಬೆಂಗಳೂರು ಪೂರ್ವ ವಿಭಾಗದ ಅಬಕಾರಿ ಆಯುಕ್ತರು ಅವಕಾಶ ನೀಡಿದ್ದಾರೆ. ಆದರೆ, ಸಿ.ವಿ.ರಾಮನ್‌ನಗರ ವಲಯದ ಬಿಬಿಎಂಪಿ ಆರೋಗ್ಯ ವೈದ್ಯಾಧಿಕಾರಿಯು ಸದಾನಂದನಗರ ವಸತಿ ಪ್ರದೇಶವಾಗಿದ್ದು, ಈ ಸ್ಥಳದಲ್ಲಿ ಮದ್ಯದಂಗಡಿ ಪರವಾನಿಗೆ ನೀಡಬಾರದೆಂದು ಸ್ಥಳೀಯರು ದೂರು ಸಲ್ಲಿಸಿದ್ದಾರೆ. ಹೀಗಾಗಿ, ಮದ್ಯದಂಗಡಿ ಪರವಾನಿಗೆಯ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಆದೇಶ ಕರ್ನಾಟಕ ಅಬಕಾರಿ ಕಾಯ್ದೆಗೆ ವಿರುದ್ಧವಾಗಿದೆ. ಹೀಗಾಗಿ, ಬಿಬಿಎಂಪಿ ಮದ್ಯದಂಗಡಿ ಪರವಾನಿಗೆಯ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಆದೇಶವನ್ನು ರದ್ದುಗೊಳಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.





