ಕೋರ್ಟ್ ಆದೇಶ ನೀಡಿದರೂ ಭೋಜ ಶೆಟ್ಟಿಗೆ ಸಿಗದ ನ್ಯಾಯ
ಮಕ್ಕಳಿಂದ ಮಾಶಾಸನಕ್ಕೆ ಹೋರಾಡುತ್ತಿರುವ ಹಿರಿಯ ನಾಗರಿಕ

ಭೋಜ ಶೆಟ್ಟಿ
ಉಡುಪಿ, ಡಿ.31: ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಮಕ್ಕಳಿಗೆ ಧಾರೆ ಎರೆದು ಇದೀಗ ಬೀದಿಪಾಲಾಗಿರುವ ಹೆಬ್ರಿ ಸಮೀಪದ ಮುದ್ರಾಡಿಯ ಭೋಜ ಶೆಟ್ಟಿ (77) ಅವರಿಗೆ ಮಾಶಾಸನ ನೀಡುವಂತೆ ಕುಂದಾಪುರದಲ್ಲಿರುವ ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿ ಆದೇಶ ನೀಡಿ ತಿಂಗಳಾದರೂ ಇನ್ನೂ ನ್ಯಾಯ ದೊರಕಿಲ್ಲ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಆರೋಪಿಸಿದೆ.
ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿಂದು ಭೋಜ ಶೆಟ್ಟಿ ಸಮ್ಮುಖದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ ಶಾನುಭಾಗ್, ಈ ಬಗ್ಗೆ ನ್ಯಾಯ ದೊರಕದೆ ಇದ್ದಲ್ಲಿ ಹೈಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದರು.
ಆಸ್ತಿ ಮಕ್ಕಳಿಗೆ ಪಾಲು: ಭೂಸುಧಾರಣಾ ಕಾಯ್ದೆಯಡಿ ಸುಮಾರು ಐದು ಎಕರೆ ಜಮೀನು ಪಡೆದಿದ್ದ ಭೋಜ ಶೆಟ್ಟಿ, 35ವರ್ಷಗಳ ಕಾಲ ಕೃಷಿಕರಾಗಿ ದುಡಿದು, ಐದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು ಸಾಕಿ ಬೆಳೆಸಿದರು. ಹೆಣ್ಣು ಮಕ್ಕಳಿಗೆ ಮದುವೆ ಆಗಿದ್ದು, ಮೂವರು ಗಂಡು ಮಕ್ಕಳು ಮುಂಬೈ, ಗೋವಾಗಳಲ್ಲಿ ಹೊಟೇಲು ಉದ್ಯಮ ನಡೆಸುತ್ತಿದ್ದಾರೆ.
1995ರಲ್ಲಿ ಹೆಂಡತಿ, ಮಕ್ಕಳ ಇಚ್ಚೆಯಂತೆ ತನ್ನ ಹೆಸರಿನಲ್ಲಿದ್ದ ಕೃಷಿಭೂಮಿ ಹಾಗೂ ಮನೆಯನ್ನು ಪಾಲುಮಾಡಿ ಊರಲಿದ್ದ ಗಂಡು ಮಕ್ಕಳಿಗೆ ನೀಡಿ ನಿವೃತ್ತರಾದರು. ಆಗ ಮಕ್ಕಳೊಂದಿಗೆ ಮಾಡಿಕೊಂಡ ಕರಾರಿನಂತೆ ತನ್ನ ಜೀವನ ನಿರ್ವಹಣೆಗಾಗಿ ಅವರಿಂದ ಮಾಶಾಸನ ಪಡೆಯುತ್ತಿದ್ದರು. ಎರಡು ವರ್ಷಗಳಲ್ಲಿ ಇವರು ಮಕ್ಕಳಿಂದ ನಿರ್ಲಕ್ಷಕ್ಕೆ ಒಳಗಾದರು. ಮಾಶಾಸನ ನೀಡುವುದನ್ನು ಮಕ್ಕಳು ನಿಲ್ಲಿಸಿದಾಗ ಜೀವನ ನಿರ್ವಹಣೆಗಾಗಿ ಅವರಿವರಿಂದ ಭಿಕ್ಷೆ ಬೇಡುವ ಸ್ಥಿತಿ ಬಂತು ಎಂದು ತಿಳಿಸಿದ್ದಾರೆ.
ವೃದ್ದಾಪ್ಯದಿಂದ ಬಳಲುತ್ತಿದ್ದ ಬಾಬು ಶೆಟ್ಟಿ ಎರಡೊತ್ತಿನ ಊಟಕ್ಕಾಗಿ ಮತ್ತೆ ಕೂಲಿ ಮಾಡತೊಡಗಿದರು. ಅನಾರೋಗ್ಯಕ್ಕೆ ತುತ್ತಾದ ಅವರು, ಸಿರಿವಂತ ಮಕ್ಕಳಿದ್ದರೂ ಕಳೆದ ಮೂರು ವರ್ಷಗಳಿಂದ ಮುದ್ರಾಡಿಯ ವರಂಗದಲ್ಲಿರುವ ಕಾರ್ಖಾನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ದುಡಿಯುತಿದ್ದಾರೆ. ಈ ಮಧ್ಯೆ ಅವರು ಮಾಶಾಸನ ತೆಗೆಸಿಕೊಡುವಂತೆ 2016ರಲ್ಲಿ ಹೆಬ್ರಿ ಪೊಲೀಸರಿಗೆ ದೂರು ನೀಡಿದರು. ಅದರಂತೆ ಪೊಲೀಸರು ಮಕ್ಕಳೆಲ್ಲರನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಂಡರೂ ಮಾಶಾಸನ ಕೊಡಲಿಲ್ಲ.
ಪ್ರತಿಷ್ಠಾನಕ್ಕೆ ದೂರು: 2018ರ ಅಕ್ಟೋಬರ್ನಲ್ಲಿ ಭೋಜ ಶೆಟ್ಟಿ ನ್ಯಾಯ ಕ್ಕಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿದರು. ಕುಂದಾಪುರದಲ್ಲಿರುವ ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿಯ ಅಧ್ಯಕ್ಷರಾಗಿರುವ ಸಹಾಯಕ ಕಮೀಷನರರಿಗೆ ದೂರು ನೀಡಿ, ಆಸ್ತಿ ಪಡೆದು ಕೊಂಡ ಮಕ್ಕಳು ಕರಾರಿನಂತೆ ಮಾಶಾಸನ ನೀಡದಿದ್ದಲ್ಲಿ ಆಸ್ತಿಗಳನ್ನು ಬೋಜ ಶೆಟ್ಟಿಗೆ ಪುನರ್ ವರ್ಗಾಯಿಸುವಂತೆ ವಿನಂತಿಸಲಾಯಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯ ಮಂಡಳಿ, 2019ರ ಡಿಸೆಂಬರ್ನಲ್ಲಿ ಆದೇಶ ನೀಡಿ, ಎಲ್ಲ ಐದು ಮಂದಿ ಗಂಡು ಮಕ್ಕಳು ತಲಾ 2000 ರೂ. ಮಾಶಾಸನವನ್ನು ತಂದೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲು ಮತ್ತು ವಾಸಕ್ಕೆ ಬಾಡಿಗೆ ಮನೆಯ ವ್ಯವಸ್ಥೆ ಮಾಡಲು ಸೂಚಿಸಿತು. ಆದೇಶ ಬಂದು ತಿಂಗಳಾದರೂ ಬಾಬು ಶೆಟ್ಟಿಯ ಬ್ಯಾಂಕ್ ಖಾತೆಗೆ ಮಕ್ಕಳು ಹಣ ಜಮೆ ಮಾಡಿಲ್ಲ. ಇದೀಗ ಆದೇಶ ಪಾಲನೆಗಾಗಿ ನ್ಯಾಯಮಂಡಳಿಯಿಂದ ನೇಮಕವಾದ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗೆ ಬಾಬು ಶೆಟ್ಟಿ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯ ಸಿಗದಿದ್ದರೆ ಆತ್ಮಹತ್ಯೆ: ಭೋಜ ಶೆಟ್ಟಿ
ಡಿ.19ರಂದು ಮುದ್ರಾಡಿಯಲ್ಲಿ ನನ್ನ ನಾಲ್ಕನೆ ಮಗ ಸುಭಾಷ್ ಶೆಟ್ಟಿ ಅಡ್ಡಗಟ್ಟಿ, ದೂರು ಕೊಟ್ಟಿರುವ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದು, ಮಾಶಾಸನ ನೀಡುವುದಿಲ್ಲ ಎಂಬುದಾಗಿ ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ ಹೆಬ್ರಿ ಪೋಲೀಸ್ ಠಾಣೆಗೆ ದೂರು ನೀಡಿ, ರಕ್ಷಣೆ ನೀಡುವಂತೆ ಕೋರಿದ್ದೇನೆ ಎಂದು ಬೋಜ ಶೆಟ್ಟಿ ತಿಳಿಸಿದರು.
''ನಾನು ಕೆಲಸ ಮಾಡುತ್ತಿದ್ದ ಕಾರ್ಖಾನೆ ಮುಚ್ಚಿರುವುದರಿಂದ ಈಗ ಕೆಲಸ ಕಳೆದುಕೊಂಡಿದ್ದೇನೆ. ಇದೀಗ ನಡೆದಾಡಲು ಶಕ್ತಿ ಇಲ್ಲದ ನಾನು, ನ್ಯಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ. ಉಡುಪಿ ಜಿಲ್ಲಾಧಿಕಾರಿಗೆ, ಕುಂದಾಪುರದ ಸಹಾಯಕ ಕಮೀಷನರಿಗೆ, ಹೆಬ್ರಿ ಪೊಲೀಸ್ ಠಾಣೆಗೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿಯ ಮೇಲೆ ಅರ್ಜಿ ಸಲ್ಲಿಸಿದ್ದೇನೆ. ನನಗೆ ನ್ಯಾಯ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದೇನೆ'' ಎಂದಿದ್ದಾರೆ.








