ಜ.4-5: ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್
ಉಡುಪಿ, ಡಿ.31: ಕುಬುಡೋ ಬುಡೊಕಾನ್ ಕರಾಟೆ- ಡೋ ಅಸೋಸಿ ಯೇಶನ್ ಕರ್ನಾಟಕ ಇದರ ಆಶ್ರಯದಲ್ಲಿ ನಾಲ್ಕನೆ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ಕೆಬಿಕೆ ಕಪ್- 2020ನ್ನು ಜ.4 ಮತ್ತು 5ರಂದು ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಹಾಲ್‌ನಲ್ಲಿ ಆಯೋಜಿಸಲಾಗಿದೆ.
ಜ.4ರಂದು ಆರು ವರ್ಷ, ಕೆಳಗಿನ, 7-8ವರ್ಷ, 9-10 ಮತ್ತು 11-12 ವರ್ಷಗಳ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ಸುಮಾರು 2000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಜ.5ರಂದು 13-14, 15-16, 17-18 ಮತ್ತು 19ವರ್ಷ ಮೇಲ್ಪಟ್ಟ ವಿಭಾಗಗಳಲ್ಲಿ ಸ್ಪರ್ಧೆ ಜರಗಲಿದೆ. ಬ್ಲಾಕ್ ಬೆಲ್ಟ್ ನಲ್ಲಿ 12, 16, 20ವರ್ಷ ಕೆಳಗಿನ ಮತ್ತು 20ವರ್ಷ ಮೇಲ್ಪಟ್ಟ ವಿಭಾಗ ಗಳು ಇವೆ ಎಂದು ಕೆಬಿಕೆ ಅಧ್ಯಕ್ಷ ರವಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಕುಮಿಟೆ ಮತ್ತು ಕಟಾದಲ್ಲಿ 16ವರ್ಷ ಕೆಳಗಿನ ಹಾಗೂ ಮೇಲ್ಪಟ್ಟವರ ವಿಭಾಗ ದಲ್ಲಿ ಗ್ರಾಂಡ್‌ಚಾಂಪಿಯನ್‌ಶಿಪ್ ನಡೆಯಲಿದೆ. ಅದೇ ರೀತಿ ಸಮಗ್ರ ಪ್ರಶಸ್ತಿ, ತಂಡ ಟ್ರೋಫಿ ನೀಡಲಾಗುವುದು. ಜ.4ರಂದು ಬೆಳಗ್ಗೆ 9ಗಂಟೆಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಸದೆ ಶೋಭಾ ಕರಂದ್ಲಾಜೆ ವಹಿಸಲಿರುವರು. 5ರಂದು ಸಂಜೆ 6ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಅಂಬಲಪಾಡಿ ದೇವಳದ ಧರ್ಮದರ್ಶಿ ಬಹುಮಾನ ವಿತರಿಸಲಿರುವರು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆಬಿಕೆ ಕಾರ್ಯದರ್ಶಿ ಸಂತೋಷ್ ಸುವರ್ಣ, ಆಶ್ಲೆ ನಿಹಾಲ್, ಸೀತಾರಾಮ್ ಪೂಜಾರಿ, ಶ್ರೀಯಾನ್ ಉಪ್ಪೂರು ಉಪಸ್ಥಿತರಿದ್ದರು.







