ಉಡುಪಿ ಜಿಲ್ಲೆಯಲ್ಲಿ 80,909 ಮಕ್ಕಳಿಗೆ ಪೋಲಿಯೋ ಲಸಿಕೆ: ಎಡಿಸಿ ಸದಾಶಿವ ಪ್ರಭು
ಉಡುಪಿ ಡಿ.31: ಜನವರಿ 19ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿನ 0-5 ವರ್ಷದೊಳಗಿನ 80909 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಪಲ್ಸ್ ಪೋಲಿಯೊ ಕಾರ್ಯಕ್ರಮದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಭಾರತ ಪೋಲಿಯೋ ಮುಕ್ತವಾಗಿದ್ದರೂ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಪೋಲಿಯೋ ಇದ್ದು, ಅಲ್ಲಿನ ವೈರಾಣುಗಳು ಭಾರತದಲ್ಲಿ ಹರಡುವ ಸಾಧ್ಯತೆಗಳಿರುವುದರಿಂದ, ಮುಂಜಾಗ್ರತೆ ಉದ್ದೇಶದಿಂದ 0-5ವರ್ಷದ ಎಲ್ಲಾ ಮಕ್ಕಳೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ಪಡೆಯಬೇಕು. ಉಡುಪಿ ತಾಲೂಕಿನ 38617, ಕುಂದಾಪುರದ 28350, ಕಾರ್ಕಳದಲ್ಲಿ 13942 ಮಕ್ಕಳು ಸೇರಿದಂತೆ ಒಟ್ಟು 80909 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದ್ದು, ಇದಕ್ಕಾಗಿ ಜಿಲ್ಲೆಯಾದ್ಯಂತ 677 ಬೂತ್‌ಗಳನ್ನು ತೆರೆಯಲಾಗುವುದು ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಸತೀಶ್ ಚಂದ್ರ ಮಾತನಾಡಿ, ಭಾರತದಲ್ಲಿ ಕೊನೆಯದಾಗಿ 2011ರ ಜ.13ರಲ್ಲಿ ಹಾಗೂ ಕರ್ನಾಟಕದಲ್ಲಿ 2007ರಲ್ಲಿ ಪೋಲಿಯೋ ಪ್ರಕರಣ ಕಂಡು ಬಂದಿದ್ದು, ಆ ಬಳಿಕ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೆ ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಇರುವುದರಿಂದ, ಮುಂಜಾಗ್ರತೆ ಉದ್ದೇಶದಿಂದ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಕೊಡಿಸಬೇಕು ಎಂದು ತಿಳಿಸಿದರು.
ಸಬೆಯಲ್ಲಿ ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡಾ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಕುಟುಂಬ ಕಲ್ಯಾಣಾ ಧಿಕಾರಿ ಡಾ. ರಾಮರಾವ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಮೊದಲಾದವರು ಉಪಸ್ಥಿತರಿದ್ದರು.







