ಕಾಂಗ್ರೆಸ್‌ನ ಹಿರಿಯ ಮುಖಂಡ, ಶಿಕ್ಷಣ ಪ್ರೇಮಿ ಅಬ್ದುಲ್ ಖಾದರ್ ನಿಧನ

ಮಂಗಳೂರು, ಡಿ.31: ಕಾಂಗ್ರೆಸ್‌ನ ಹಿರಿಯ ಮುಖಂಡ, ಶಿಕ್ಷಣ ಪ್ರೇಮಿ ಮಾಣಿಯ ಕೆ.ಅಬ್ದುಲ್ ಖಾದರ್ (94) ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಕೊಡಾಜೆಯ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಸಂಜೆ ನಿಧನರಾದರು.
ಅವರಿಗೆ 6 ಮಂದಿ ಪುತ್ರರಿದ್ದಾರೆ. 80ರ ದಶಕದಲ್ಲಿ ಮಾಣಿ ವಿದ್ಯಾಭಿವರ್ಧಕ ಸಂಘ ಸ್ಥಾಪಿಸಿ ಅದರ ಅಡಿಯಲ್ಲಿ ಕರ್ನಾಟಕ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆರಂಭಿಸಿದರು. ಇದರಿಂದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಹೆಚ್ಚು ಅನುಕೂಲವಾಯಿತು.
70ರ ದಶಕದಲ್ಲಿ ಸರಕಾರ ಜಾರಿಗೆ ತಂದ ‘ಉಳುವವನೇ ಹೊಲದೊಡೆಯ’ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದರು. ಬಡ ಗೇಣಿದಾರರ ಪರವಾಗಿ ಸದಾ ಹೋರಾಟ ನಡೆಸಿ ಅವರಿಗೆ ಭೂಮಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ಅಂದಿನ ಕಾಂಗ್ರೆಸ್‌ನ ಹಿರಿಯ ನಾಯಕ ಕಾಪು ಭಾಸ್ಕರ ಶೆಟ್ಟಿಯವರ ಒಡನಾಡಿಯಾಗಿದ್ದರು.
ಕರಾವಳಿಯ ಹಲವು ಹಿರಿಯ ನಾಯಕರಿಗೆ ರಾಜಕೀಯ ಗುರುವಾಗಿದ್ದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮುಖಂಡರಾದ ಜನಾರ್ದನ ಪೂಜಾರಿ, ರಮಾನಾಥ ರೈ, ವಿನಯಕುಮಾರ್ ಸೊರಕೆ, ಸಂಕಪ್ಪ ರೈ ಮೊದಲಾದವರಿಗೆ ಮಾರ್ಗದರ್ಶಕರಾಗಿದ್ದರು.
ಶೈಕ್ಷಣಿಕ ಸಾಮಾಜಿಕ ಸೇವೆಗಳ ಜೊತೆಗೆ ಧಾರ್ಮಿಕ ಕಾರ್ಯ ಹಾಗೂ ಸರ್ವಧರ್ಮಗಳ ಸಮನ್ವಯತೆಗಾಗಿ ಹಗಳಿರುಳು ದುಡಿದಿದ್ದಾರೆ. 70ರ ದಶಕದಲ್ಲಿ ಕೋಮುದಳ್ಳುರಿ ಹೆಚ್ಚಾದಾಗ ಹಿಂದೂ-ಮುಸ್ಲಿಂ ಮುಖಂಡರನ್ನು ಒಟ್ಟಿಗೆ ಸೇರಿಸಿ ಕೋಮುಸಾಮರಸ್ಯ ಮೆರೆದಿದ್ದರು.
ಜ.1ರಂದು ಬೆಳಗ್ಗೆ ಕೊಡಾಜೆ ಜುಮಾ ಮಸೀದಿ ವಠಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.







