ಮೂಡುಬಿದಿರೆ: ಜ.2ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ
ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಜ.2ರಂದು ಮಧ್ಯಾಹ್ನ 2.30ಕ್ಕೆ ಸಂವಿಧಾನ ರಕ್ಷಣಾ ಸಮಿತಿಯ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ, ಜನವಿರೋಧಿ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಅಬ್ದುಸ್ಸಲಾಂ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ದಿಕ್ಸೂಚಿ ಭಾಷಣ ಮಾಡಲಿದ್ದು, ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ನಾಯಕರು ಭಾಗವಹಿಸಲಿದ್ದಾರೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಮೂಡುಬಿದಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯಿಂದ ಸ್ವರಾಜ್ಯ ಮೈದಾನದವರೆಗೆ ಪ್ರತಿಭಟನಾ ಜಾಥಾ ನಡೆಯಲಿದ್ದು ಆ ಬಳಿಕ ಸ್ವರಾಜ್ಯ ಮೈದಾನದಲ್ಲಿ ಸುಮಾರು ಮೂರು ಸಾವಿರ ಮಂದಿಯ ಪಾಲ್ಗೊಳ್ಳುವಿಕೆಯಲ್ಲಿ ಪ್ರತಿಭಟನೆ ನಡೆಯಲಿದೆ. ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು.
ಪುರಸಭೆ ಸದಸ್ಯ ಹಿಮಾನುತುಲ್ಲಾ, ಮೂಡುಬಿದಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರೆಹ್ಮಾನ್, ಮುಲ್ಕಿ-ಮೂಡುಬಿದಿರೆ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಡಿ.ಎ ಉಸ್ಮಾನ್ ಹಾಜಿ, ಬೆಳುವಾಯಿ ಮಸೀದಿ ಅಧ್ಯಕ್ಷ ನಝೀರ್ ಅಹಮ್ಮದ್, ಮಯ್ಯದಿ ಗುಂಡುಕಲ್, ಅಶ್ರಫ್ ಹಾಜಿ ತೋಡಾರ್, ಅಶ್ರಫ್ ಮರೋಡಿ, ಮಹಮ್ಮದ್ ಶಾಫಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





