ಪರಿಶ್ರಮ, ಸಾಧನೆಯೊಂದಿಗೆ ಉತ್ತಮ ಸಮಾಜ ಕಟ್ಟೋಣ: ಝಮೀರುದ್ಧೀನ್ ಷಾ
ಪಿ.ಎ.ಎಂಜಿನಿಯರಿಂಗ್ ಕಾಲೇಜಿನ ಪದವಿ ಪ್ರಧಾನ ಸಮಾರಂಭ

ಕೊಣಾಜೆ: ಕಲಿಕೆಗೆ ಅಂತ್ಯ ಇರುವುದಿಲ್ಲ. ಅದೊಂದು ನಿರಂತರವಾದ ಪ್ರಕ್ರಿಯೆಯಾಗಿದೆ. ನಿರಂತರ ಕಲಿಕೆಯೊಂದಿಗೆ ಜ್ಞಾನ ವಂತರಾಗಿ ಮುನ್ನಡೆಯುವ ಜಾಣ್ಮೆ ನಮ್ಮದಾಗಿರಬೇಕು. ತಂತ್ರಜ್ಞಾನಗಳ ಬಳಕೆ, ಉತ್ತಮ ಪರಿಶ್ರಮ, ಸಾಧನೆಯ ಮೂಲಕ ಸಮಾಜಕ್ಕೆ ನಮ್ಮಿಂದಾದ ಕೊಡುಗೆ ನೀಡಿ ಮಾದರಿ ಸಮಾಜವನ್ನು ಕಟ್ಟುವ ಛಲ ನಮ್ಮಲ್ಲಿರಬೇಕಿದೆ ಎಂದು ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಹಾಗೂ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಲೆಪ್ಟಿನಂಟ್ ಜನರಲ್ ಝಮೀರುದ್ಧೀನ್ ಷಾ ಹೇಳಿದರು.
ಅವರು ಮಂಗಳವಾರ ಕೊಣಾಜೆ ನಡುಪದವಿನ ಪಿ.ಎ.ಎಂಜಿನಿಯರಿಂಗ್ ಕಾಲೇಜಿನ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ, ಜಲಸಂರಕ್ಷಣೆಯ ಬಗೆಗಿನ ಕಾಳಜಿ ಹಾಗೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಎಚ್ಚೆತ್ತುಕೊಂಡು ಈ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ಯುವ ಜನಾಂಗದ ಮೂಲಕ ಆಗಬೇಕಿದೆ ಎಂದರು. ಮಣಿಪಾಲ ಮಾಹೆ ವಿವಿಯ ಕುಲಪತಿ ಡಾ.ಎಚ್ .ವಿನೋದ್ ಭಟ್ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಾವು ವಿದ್ಯಾರ್ಥಿ ಜೀವನ ದಲ್ಲೇ ಶಿಸ್ತು, ಪ್ರಾಮಾಣಿಕತೆ, ಕಠಿಣ ಪರಿಶ್ರಮದೊಂದಿಗೆ ಮುನ್ನಡೆದರೆ ಉಜ್ವಲ ಭವಿಷ್ಯ ಕಂಡುಕೊಳ್ಳಲು ಸಾಧ್ಯ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವು ಬಹಳಷ್ಟು ಮುಂದುವರಿದಿದ್ದು ಇದರ ಜೊತೆಗೆ ಮಾನವೀಯ ಮೌಲ್ಯ, ಉತ್ತಮ ಕೌಶಲ್ಯದ ಮೂಲಕ ಸ್ಪರ್ಧಾತ್ಮಕ ಔದ್ಯೋಗಿಕ ರಂಗವನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲಬೇಕು ಎಂದು ಹೇಳಿದರು.
ಪಿ.ಎ.ಎಜ್ಯುಕೇಷನ್ ಟ್ರಸ್ಟ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ.ಪಿ.ಎ. ಇಬ್ರಾಹಿಂ ಹಾಜಿ ಮಾತನಾಡಿ, ಪಿ.ಎ.ಕಾಲೇಜು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಸದ್ಬಳಕೆಯೊಂದಿಗೆ ಇಲ್ಲಿಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ಸೇರಿದಂತೆ ವಿದೇಶದ ಉತ್ತಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಶಿಕ್ಷಣ ಹಾಗೂ ಪ್ರಾಮಾಣಿಕತೆ, ಪರಿಶ್ರಮದ ಮೂಲಕ ಜೀವನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೇಘಾಲಯದ ವಿಜ್ಞಾನ ಮತ್ತು ತಂತ್ರಜ್ಣಾನ ವಿಶ್ವವಿದ್ಯಾಲಯ ಕುಲಪತಿ ಜನಾಬ್ ಮೆಹಬುಬುಲ್ ಹಕ್, ಸಬೀರ್ ಗಫಾರ್, ನೌಷದ್ ಸಿದ್ಧೀಕ್ ಅಲ್ ಖುರೇಷಿ, ಪಿ.ಎ.ಎಜ್ಯುಕೇಷನ್ ಟ್ರಸ್ಟ್ ನ ಹಣಕಾಸು ನಿರ್ದೇಶಕ ಅಹಮ್ಮದ್ ಕುಟ್ಟಿ, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ಲಾ ಶರೀಫ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ.ರಮೀಝ್ ಎಂ.ಕೆ, ಪಿ.ಎ.ಎಜ್ಯಕೇಶನಲ್ ಟ್ರಸ್ಟ್ ನ ಆಡಳಿತ ನಿರ್ದೆಶಕ ಡಾ.ಸರ್ಫರಾಝ್ ಹಾಸಿಂ, ಎಂಬಿಎ ವಿಭಾಗದ ನಿರ್ದೇಶಕಿ ಡಾ.ಲತಾ ಕೃಷ್ಣನ್, ಸಂಶೋಧನಾ ವಿಭಾಗದ ಡೀನ್ ಡಾ.ಝಾಹಿದ್ ಅನ್ಸಾರಿ, ಬಯಟೆಕ್ನಾಲಜಿಯ ಮುಖ್ಯಸ್ಥರಾದ ಡಾ.ಕೃಷ್ಣಪ್ರಸಾದ್, ಕಂಪ್ಯೂಟರ್ ಸಯನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ರಾದ ಡಾ.ಶರ್ಮಿಳಾ ಕುಮಾರಿ ಎಂ, ಸಿವಿಲ್ ಎಂಜಿನಿಯರಿಂಗ್ ಮುಖ್ಯಸ್ಥ ಡಾ.ಪಾಲಾಕ್ಷಪ್ಪ ಕೆ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ಸ್ ಎಂಜಿನಿಯರಿಂಗ್ ಮುಖ್ಯಸ್ಥ ಡಾ.ಎಸ್.ಅಬ್ದುಲ್ ರಹಿಮಾನ್, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ಇಂಜಿನಿಯ ರಿಂಗ್ ಮುಖ್ಯಸ್ಥ ಪ್ರೊ.ಜಾನ್ ವಾಲ್ಡರ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಬ್ದುಲ್ ಮಜೀದ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಇಸ್ಮಾಯಿಲ್ ಶಾಫಿ ಎ.ಎಂ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಝಿಶಾನ್ ಅಬ್ದುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ.ಝಿಶಾನ್ ಪ್ರಾರ್ಥಿಸಿದರು. ಪಿ.ಎ.ಎಜ್ಯುಕೇಶನಲ್ ಟ್ರಸ್ಟ್ ನ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಂ ಸ್ವಾಗತಿಸಿದರು.


















