ಮಂಗಳೂರು ಗೋಲಿಬಾರ್ ಪ್ರಕರಣ : ಫೆ.4ಕ್ಕೆ ಮಾನವ ಹಕ್ಕುಗಳ ಆಯೋಗದ ವಿಚಾರಣೆ ಮುಂದೂಡಿಕೆ

ಫೈಲ್ ಚಿತ್ರ
ಮಂಗಳೂರು, ಡಿ. 31: ನಗರದಲ್ಲಿ ಡಿ.19ರಂದು ನಡೆದ ಮಂಗಳೂರು ಗೋಲಿಬಾರ್ನಲ್ಲಿ ಅಬ್ದುಲ್ ಜಲೀಲ್ ಮತ್ತು ನೌಶೀನ್ ಎಂಬವರ ಸಾವಿಗೆ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಕಾರಣ ಎಂದು ಆರೋಪಿಸಿ ಕಾಂಗ್ರೆಸ್ನ ಮುಖಂಡರು ಸಲ್ಲಿಸಿದ್ದ ದೂರಿನ ವಿಚಾರಣೆಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗವು ಫೆ. 4ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಬಂಟ್ವಾಳ ಪುರಸಭೆಯ ಸದಸ್ಯರಾದ ಲುಕ್ಮಾನ್, ಮೂನಿಶ್ ಅಲಿ ಅಹ್ಮದ್, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮತ್ತು ಎಐಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಸಂಚಾಲಕಿ ಲಾವಣ್ಯಾ ಬಲ್ಲಾಳ್ ಡಿ. 26ರಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಡಿ.ಎಚ್.ವಘೇಲಾ, ಸದಸ್ಯರಾದ ಕೆ.ಬಿ.ಚಂಗಪ್ಪ ಮತ್ತು ರೂಪಕ್ ಕುಮಾರ್ ದತ್ತ ಅವರನ್ನೊಳಗೊಂಡ ಪೂರ್ಣ ಪೀಠದಲ್ಲಿ ಮಂಗಳವಾರ ಮಧ್ಯಾಹ್ನ ವಿಚಾರಣೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಅರ್ಜಿದಾರರು ತಮ್ಮ ದೂರಿಗೆ ಪೂರಕವಾಗಿ ಕೆಲವು ಹೊಸ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದರು. ಮೃತರ ಕುಟುಂಬದ ಸದಸ್ಯರು ಕೂಡ ವಿಚಾರಣೆ ವೇಳೆ ಹಾಜರಿದ್ದರು. ಮಂಗಳೂರಿನಲ್ಲಿ ಡಿ.19ರಂದು ನಡೆದ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟಿರುವ ಕುರಿತು ಪೊಲೀಸ್ ಆಯುಕ್ತರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ವಿಸ್ತೃತ ಮಾಹಿತಿ ಒದಗಿಸಿ ಪತ್ರ ಬರೆದಿದ್ದಾರೆ. ಈ ವಿಷಯವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಮಾನವ ಹಕ್ಕುಗಳ ಆಯೋಗದ ಜೊತೆ ಹಂಚಿಕೊಂಡಿತ್ತು ಎಂದು ಮೂಲಗಳು ಖಚಿತ ಪಡಿಸಿವೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಬಂದಿರುವ ಪತ್ರದ ವಿಚಾರವನ್ನು ಅರ್ಜಿದಾರರಿಗೆ ತಿಳಿಸಿದ ಪೀಠ, ಮತ್ತಷ್ಟು ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಒದಗಿಸುವಂತೆ ಸೂಚಿಸಿತು. ದೂರಿನ ವಿಚಾರಣೆಯನ್ನು ಫೆ.4ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.







