ಕಸ ವಿಂಗಡಿಸದೇ ನೀಡುವವರಿಗೆ ದಂಡ ವಿಧಿಸಲು ಬಿಬಿಎಂಪಿ ಚಿಂತನೆ !

ಬೆಂಗಳೂರು, ಡಿ.31: ರಾಜಧಾನಿಯಲ್ಲಿ ಮಿಶ್ರ ತ್ಯಾಜ್ಯವನ್ನು ನೀಡುವವರಿಗೆ 500 ರೂ.ಗಳು ದಂಡ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಹೊಸ ವರ್ಷದ ಆರಂಭದ ದಿನದಿಂದಲೇ ಜಾರಿ ಮಾಡಲು ಪಾಲಿಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.
ಹೊಸ ವರ್ಷದ ಆರಂಭದ ದಿನ ಜ.1 ರಿಂದಲೇ ಮಿಶ್ರ ತ್ಯಾಜ್ಯವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಅಲ್ಲದೆ, ಮೂಲದಲ್ಲಿ ತ್ಯಾಜ್ಯವನ್ನು ಬೇರ್ಪಡಿಸದ ಯಾರಿಗೇ ಆದರೂ ದಂಡ ವಿಧಿಸಲು ನಾವು ಎಲ್ಲ ತ್ಯಾಜ್ಯ ಸಂಗ್ರಹಕಾರರಿಗೆ, ಜಂಟಿ ಆರೋಗ್ಯ ತನಿಖಾಧಿಕಾರಿಗಳು ಮತ್ತು ಮಾರ್ಷಲ್‌ಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ನಗರವನ್ನು ಸ್ವಚ್ಛವಾಗಿಡಲು ಮತ್ತು ಸ್ವಚ್ಛ ಭಾರತ ಉದ್ದೇಶಗಳನ್ನು ಪೂರೈಸುವಲ್ಲಿ ತ್ಯಾಜ್ಯ ವಿಭಜನೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಹೇಳಿದ್ದಾರೆ. ಇನ್ನು, ನಾಗರಿಕ ಸಂಸ್ಥೆ ತ್ಯಾಜ್ಯ ವಿಭಜನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಆದರೆ ಅದನ್ನು ಎಂದಿಗೂ ಗಂಭೀರವಾಗಿ ಜಾರಿಗೆ ತಂದಿಲ್ಲ ಎಂದು ಘನತ್ಯಾಜ್ಯ ನಿರ್ವಹಣಾ ಕಾರ್ಯಕರ್ತರು ಆರೋಪಿಸಿದ್ದಾರೆ. ನಗರದ ಪ್ರತಿ 100 ಮನೆಗಳಲ್ಲಿ 20 ಮನೆಯವರು ತ್ಯಾಜ್ಯವನ್ನು ಮೂಲದಲ್ಲಿ ವಿಂಗಡಿಸುತ್ತಿದ್ದರೆ, ಉಳಿದವರು ಮಿಶ್ರ ತ್ಯಾಜ್ಯವನ್ನು ನಗರದಾದ್ಯಂತ ಹಾಕುವುದನ್ನು ಮುಂದುವರೆಸಿದ್ದಾರೆ. ಈ ಕಸವನ್ನು ಡಂಪ್ ಮಾಡುವ ಜಾಗದಲ್ಲಿ ಹಾಕಲಾಗುತ್ತಿದೆ. ಇದನ್ನು ನಿಲ್ಲಿಸಬೇಕಾಗಿದೆ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮೂಲದಲ್ಲಿ ಕಸ ವಿಂಗಡಿಸುವುದು ಅತ್ಯಗತ್ಯವಾಗಿದ್ದು, ಕಸ ತೆಗೆದುಕೊಂಡ ಬಳಿಕ ಪ್ರತ್ಯೇಕವಾಗಿ ವಿಂಗಡಿಸುವುದಕ್ಕೆ ಇನ್ನು ಮುಂದೆ ಅನುಮತಿಸಲಾಗುವುದಿಲ್ಲ. ಇದು ಕರಡು ಎಸ್‌ಡಿಬ್ಲೂಎಂ ನಿಯಮಗಳ ಒಂದು ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಬಾರಿಗೆ ತಪ್ಪು ಮಾಡಿದವರಿಗೆ 500 ರೂ ಮತ್ತು ನಂತರ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅವರು ಇದನ್ನು ಮುಂದುವರಿಸಿದರೆ, ನಾವು ಅವರ ಮನೆಯಿಂದ ತ್ಯಾಜ್ಯ ಸಂಗ್ರಹಿಸುವುದನ್ನು ನಿಲ್ಲಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.







