ಪ್ರಧಾನಿ ಮೋದಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ: ಡಾ.ಪುಷ್ಪಾ ಅಮರನಾಥ್

ಮೈಸೂರು,ಡಿ.31: ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪೊಲೀಸರು ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕರ್ನಾಟ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಕಿಡಿಕಾರಿದರು.
ನಗರದ ಪರ್ತಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ನ ಭವಿಷ್ಯದ ಪ್ರಧಾನಿ ಎಂದೇ ಬಿಂಬಿತರಾಗಿರುವ ಪ್ರಿಯಾಂಕ ಗಾಂಧಿ ಅವರ ಮೇಲೆ ಪೊಲೀಸರು ಎಳೆದಾಡಿದ ಘಟನೆ ನಡೆದಿದೆ. ಒಂದು ರೀತಿಯಲ್ಲಿ ಉದ್ದೇಶಪೂರ್ವಕವಾಗಿಯೇ ಅಲ್ಲಿನ ಸರ್ಕಾರ ಅಧಿಕಾರಿಗಳ ಮೂಲಕ ನಡೆಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ 20 ಜನ ಸಾವೀಗೀಡಾಗಿದ್ದಾರೆ. ಅದರಲ್ಲಿ 12 ಜನ ಗೋಲಿಬಾರ್ ನಿಂದ ಸತ್ತಿದ್ದಾರೆ. ಲಕ್ಷಾಂತರ ಜನರನ್ನು ಜೈಲಿಗೆ ಹಾಕಲಾಗಿದೆ. ಪ್ರತಿಭಟನೆ ವೇಳೆ ಅಲ್ಲಿನ ನಿವೃತ್ತ ಅಧಿಕಾರಿಯನ್ನು ಬಂಧಿಸಲಾಗಿತ್ತು. ಆ ವ್ಯಕ್ತಿಯನ್ನು ನೋಡಲು ಅವರ ಮನೆಯವರಿಗೂ ಅವಕಾಶ ನೀಡಿರಲಿಲ್ಲ, ಆಗ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕ ಗಾಂಧಿ ತಮ್ಮ ಕಾರಿನಲ್ಲಿ ಬಂಧನಕ್ಕೊಳಗಾದ ಅಧಿಕಾರಿಗಳ ಕುಟುಂಬ ಸಮೇತ ನೋಡಲು ಹೋಗುತ್ತಿದ್ದರೆ, ಸಿನಿಮೀಯ ರೀತಿಯಲ್ಲಿ ಅವರ ಕಾರನ್ನು ಅಡ್ಡಗಟ್ಟಲಾಗುತ್ತದೆ. ಅವರು ಕಾರಿನಿಂದ ಇಳಿದು ನಡೆದುಕೊಂಡೇ ಹೋಗುತ್ತಿದ್ದರು. ಮಹಿಳಾ ಪೊಲೀಸರನ್ನು ಬಿಟ್ಟು ಅವರನ್ನು ತಡೆಯುವ ನೆಪದಲ್ಲಿ ಹಲ್ಲೆ ನಡೆಸಲಾಗುತ್ತದೆ ಎಂದು ದೂರಿದರು.
ಓರ್ವ ಪ್ರತಿಷ್ಠಿತ ಕುಟುಂಬದ ವ್ಯಕ್ತಿಗೇ ಈರೀತಿಯಾದರೆ ಇನ್ನೂ ಸಾಮಾನ್ಯ ಜನರ ಗತಿಯೇನು? ಇವರ ಆಡಳಿತದಲ್ಲಿ ಯಾರು ಪ್ರಶ್ನೆ ಪ್ರತಿಭಟನೆ ಮಾಡಬಾರದೆ? ಪ್ರಧಾನಿ ಮೋದಿಯವರೇ...ಭೇಟಿ ಬಚಾವೊ ಭೇಟಿ ಪಡಾವೊ ಇದೆನಾ ಎಂದು ಪ್ರಶ್ನಿಸಿದರು.
ಹಾಗೆ ರಂಗೋಲಿ ಬಿಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದ 5 ವಿದ್ಯಾರ್ಥಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಹಾಗಾದರೆ ನಾವು ನಿಮ್ಮ ವಿರುದ್ಧ ಶಾಂತ ರೀತಿಯಲ್ಲೂ ಪ್ರತಿಭಟನೆ ಮಾಡಬಾರದೆ ಎಂದ ಅವರು, ಈ ಘಟನೆಗಳಿಗೆ ಕಾರಣರಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನಿಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮೇಯರ್ ಮೋದಾಮಣಿ, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪುಷ್ಪವಲ್ಲಿ, ಪ್ರಧಾನ ಕಾರ್ಯದರ್ಶಿ ಲತಾ ಮೋಹನ್ ಉಪಸ್ಥಿತರಿದ್ದರು.







