‘ಸಂವಿಧಾನ ರಕ್ಷಿಸುತ್ತೇವೆ’: ಇಂಡಿಯಾ ಗೇಟ್ ಬಳಿ ಸಾವಿರಾರು ಜನರಿಂದ ಪ್ರತಿಜ್ಞೆ
ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ

ಹೊಸದಿಲ್ಲಿ, ಜ. 1: ಹೊಸದಿಲ್ಲಿಯ ಇಂಡಿಯಾ ಗೇಟ್ನಲ್ಲಿ ಬುಧವಾರ ಸಂವಿಧಾನ ರಕ್ಷಿಸುವುದಾಗಿ ಸಾಮೂಹಿಕ ಪ್ರತಿಜ್ಞೆ ಮಾಡುವ ಮೂಲಕ ಸಾವಿರಾರು ಪ್ರತಿಭಟನೆಕಾರರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಆರಂಭಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತು. ಇಲ್ಲಿಗೆ ಸಮೀಪದ ಐದು ಮೆಟ್ರೋ ಸ್ಟೇಷನ್ಗಳಲ್ಲಿ ರೈಲುಗಳ ಸಂಚಾರ ರದ್ದುಗೊಂಡಿತು.
ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರ ಸಂಚಾರಕ್ಕೆ ಅಡ್ಡಿ ಉಂಟಾಯಿತು. ‘‘ಕೇಂದ್ರ ಸೆಕ್ರೇಟರಿಯೇಟ್, ಉದ್ಯೋಗಭವನ, ಪ್ರಗತಿ ಮೈದಾನ, ಖಾನ್ ಮಾರುಕಟ್ಟೆ ಹಾಗೂ ಮಂಡಿ ಹೌಸ್ ಮೆಟ್ರೋ ಸ್ಟೇಷನ್ಗಳ ಆಗಮನ ಹಾಗೂ ನಿರ್ಗಮನವನ್ನು ಮುಚ್ಚಲಾಯಿತು’’ ಎಂದು ದಿಲ್ಲಿ ಮೊಟ್ರೊ ರೈಲ್ ಕಾರ್ಪೊರೇಶನ್ ಟ್ವೀಟ್ ಮಾಡಿದ್ದಾರೆ.
ಹೊಸದಿಲ್ಲಿಯ ಇತರ ಎರಡು ಕಡೆ ಕೂಡ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. ಶಹೀನ್ಭಾಗ್ನಲ್ಲಿ ಮಹಿಳೆಯರ ಪ್ರತಿಭಟನೆ ಹೊಸವರ್ಷದ ಮಧ್ಯರಾತ್ರಿ 7ನೇ ದಿನಕ್ಕೆ ತಲುಪಿದೆ. ಸಂಸತ್ ಭವನದ ರಸ್ತೆಯಲ್ಲಿರುವ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ನಾಗರಿಕರ ಗುಂಪೊಂದು ಪ್ರತಿಭಟನೆ ನಡೆಸಿತು. ‘‘ನಾವು ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಸಂವಿಧಾನವನ್ನು ರಕ್ಷಿಸುವುದು ನಮ್ಮ ಹೊಸ ವರ್ಷದ ನಿರ್ಣಯ’’ ಎಂದು ಪ್ರತಿಭಟನಕಾರರೋರ್ವರು ತಿಳಿಸಿದ್ದಾರೆ.