ಜೈಪುರ: ಮತ್ತೆ 9 ಶಿಶುಗಳ ಸಾವು

ಜೈಪುರ, ಜ.2: ಕೋಟಾದ ಜೆ.ಕೆ.ಲಾನ್ ಆಸ್ಪತ್ರೆಯಲ್ಲಿ 2019ರ ಕೊನೆಯ ಎರಡು ದಿನ ಮತ್ತೆ ಒಂಬತ್ತು ಶಿಶುಗಳು ಸಾವನ್ನಪ್ಪಿದ್ದು, ಡಿಸೆಂಬರ್ ತಿಂಗಳಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 100ಕ್ಕೆ ತಲುಪಿದೆ. 2018ರಲ್ಲಿ ಈ ಆಸ್ಪತ್ರೆಯಲ್ಲಿ 77 ಶಿಶುಗಳು ಸಾವನ್ನಪ್ಪಿದ್ದವು.
"ಜೆ.ಕೆ.ಲಾನ್ ಆಸ್ಪತ್ರೆಯಲ್ಲಿ ಡಿಸೆಂಬರ್ 30 ಹಾಗೂ 31ರಂದು ಕನಿಷ್ಠ ಒಂಬತ್ತು ನವಜಾತ ಶಿಶುಗಳು ಸಾವನ್ನಪ್ಪಿವೆ. ಡಿಸೆಂಬರ್ನಲ್ಲಿ ಮೃತಪಟ್ಟ ಶಿಶುಗಳ ಸಂಖ್ಯೆ 100ನ್ನು ತಲುಪಿದೆ" ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಸುರೇಶ್ ದುಲಾರಾ ಹೇಳಿದ್ದಾರೆ. ಈ ಎಲ್ಲ ಮಕ್ಕಳು ಕಡಿಮೆ ತೂಕದ ಕಾರಣದಿಂದ ಮೃತಪಟ್ಟಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ರಾಜಸ್ತಾನ ಸರ್ಕಾರ ಆದೇಶ ಹೊಡಿಸಿ, ಎಲ್ಲ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಕಾರ್ಯನಿರ್ವಹಣೆ ಸ್ಥಿತಿಗತಿಯ ತಪಾಸಣೆ ನಡೆಸುವಂತೆ ಮತ್ತು ಲಭ್ಯವಿರುವ ವೈದ್ಯಕೀಯ ಸಲಕರಣೆಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಆಸ್ಪತ್ರೆಯಲ್ಲಿ ಮೃತಪಟ್ಟ ಶಿಶುಗಳ ಪೈಕಿ ಬಹುತೇಕ ಶಿಶುಗಳು ಇತರ ಆಸ್ಪತ್ರೆಗಳಿಂದ, ಅದರಲ್ಲೂ ಮುಖ್ಯವಾಗಿ ನೆರೆಯ ಮಧ್ಯಪ್ರದೇಶದಿಂದ ಚಿಂತಾಜನಕ ಸ್ಥಿತಿಯಲ್ಲಿ ಜೆ.ಕೆ.ಲಾನ್ ಆಸ್ಪತ್ರೆಗೆ ಕರೆತಂದ ಶಿಶುಗಳು ಎಂದು ಕಳೆದ ವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಆರೋಗ್ಯ ಸಚಿವ ರಘು ಶರ್ಮಾ ಹೇಳಿಕೆ ನೀಡಿದ್ದರು. 2018ಕ್ಕೆ ಹೋಲಿಸಿದರೆ 2019ರಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ ಕಡಿಮೆ ಎಂದು ದುರಾಲಾ ಹೇಳಿದ್ದಾರೆ. 2018ರಲ್ಲಿ 1005 ಹಾಗೂ 2018ರಲ್ಲಿ 963 ಮಕ್ಕಳು ಮೃತಪಟ್ಟಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
2014ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 15,719 ಮಕ್ಕಳ ಪೈಕಿ 1,198 ಮಕ್ಕಳು ಮೃತಪಟ್ಟಿದ್ದವು. 2015ರಲ್ಲಿ ಈ ಪ್ರಮಾಣ ಶೇಕಡ 7.2, 2016ರಲ್ಲಿ 6.6, 2017ರಲ್ಲಿ 5.9, 2018ರಲ್ಲಿ 6.1 ಹಾಗೂ 2019ರಲ್ಲಿ ಕನಿಷ್ಠ ಪ್ರಮಾಣದ ಅಂದರೆ 5.7ರಷ್ಟು ಮಕ್ಕಳು ಮಾತ್ರ ಮೃತಪಟ್ಟಿವೆ ಎಂದು ಜಿಲ್ಲಾಧಿಕಾರಿ ಓಂಕೇಶರ ಅಂಕಿ ಅಂಶ ನೀಡಿದ್ದಾರೆ.