ದಿಲ್ಲಿಯ ಕಾರ್ಖಾನೆಯಲ್ಲಿ ಸ್ಫೋಟ; 14 ಮಂದಿಗೆ ಗಾಯ

ಹೊಸದಿಲ್ಲಿ, ಜ. 2: ದಿಲ್ಲಿಯ ಪಿರಗಡಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ಗುರುವಾರ ಬೆಳಗ್ಗೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಅನಂತರ ನಡೆದ ಸ್ಫೋಟದಿಂದ ಕಟ್ಟಡ ಕುಸಿತಕ್ಕೊಳಗಾಗಿ ಅದರ ಅವೇಶಷಗಳಡಿ ಸಿಲುಕಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ದಿಲ್ಲಿಯ ಹೊರವಲಯದ ಮುಂಡ್ಕಾ ಪ್ರದೇಶದಲ್ಲಿರುವ ಬ್ಯಾಟರಿ ತಯಾರಿಕೆ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸಿದ ಸಂದರ್ಭ ಸ್ಫೋಟ ಸಂಭವಿಸಿ ಕಟ್ಟಡ ಕುಸಿಯಿತು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸಹಿತ ಹಲವರು ಸಿಲುಕಿಕೊಂಡಿದ್ದರು.
ಅಗ್ನಿಶಾಮಕ ದಳಾ ಕಾರ್ಯಾಚರಣೆ ನಡೆಸಿ ಹಲವರನ್ನು ರಕ್ಷಿಸಿತು. ಆದರೆ, ಗಂಭೀರ ಗಾಯಗೊಂಡಿದ್ದ ಅಮಿತ್ ಬಲಯಾನ್ ಮೃತಪಟ್ಟಿದ್ದಾರೆ. ಗಾಯಗೊಂಡ ಇತರ 17 ಮಂದಿಯನ್ನು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ದಿಲ್ಲಿ ಅಗ್ನಿ ಶಾಮಕ ದಳದ ವರಿಷ್ಠ ಅತುಲ್ ಗರ್ಗ್ ತಿಳಿಸಿದ್ದಾರೆ. ‘‘ಬೆಳಗ್ಗೆ 9 ಗಂಟೆಗೆ ಕಟ್ಟಡದಲ್ಲಿ ಸ್ಫೋಟ ಸಂಭವಿಸಿತು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಕಾರ್ಖಾನೆಯ ಇಬ್ಬರು ಉಸ್ತುವಾರಿಗಳು, ಓರ್ವ ಭದ್ರತಾ ಸಿಬ್ಬಂದಿ ಹಾಗೂ 15 ಮಂದಿ ಅಗ್ನಿಶಾಮಕ ದಳದ ಸಿಬ್ಬಂದಿ ಸಿಲುಕಿದರು’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







