ಸಿದ್ದಲಿಂಗ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪ್ರಧಾನಿ ಮೋದಿ ನಮನ

ತುಮಕೂರು, ಜ.2: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಿದ್ದಗಂಗಾ ಮಠಕ್ಕೆ ಆಗಮಿಸಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಪೂಜೆ ನೆರವೇರಿಸಿದರು.
ನಂತರ ಅವರು ಮಠಕ್ಕೆ ತಮ್ಮ ಭೇಟಿಯ ಸ್ಮರಣಾರ್ಥ ಬಿಲ್ವಪತ್ರೆ ಗಿಡ ನೆಟ್ಟು ನೀರೆರೆದರು. ಅಲ್ಲದೆ ಲಿಂಗೈಕ್ಯ ಶಿವಕುಮಾರ ಶ್ರೀಗಳ ವಸ್ತು ಸಂಗ್ರಹಾಲಯ ಶಂಕುಸ್ಥಾಪನೆ ನೆರವೇರಿಸಿದರು.
ಜನವರಿ 21 ರಂದು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಪುಣ್ಯಾರಾಧನೆ ಇದೆ. ಅದಕ್ಕೆ ಪ್ರಧಾನ ಮಂತ್ರಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಗಣರಾಜ್ಯೋತ್ಸವ ಸಮೀಪ ಇರುವ ಕಾರಣ ನರೇಂದ್ರ ಮೋದಿಯವರು ಮುಂಚಿತವಾಗಿಯೇ ಮಠಕ್ಕೆ ಆಗಮಿಸಿ ಸ್ವಾಮೀಜಿಯವರ ಗದ್ದುಗೆ ಪೂಜೆ ನೆರವೇರಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಡಿ.ವಿ ಸದಾನಂದ ಗೌಡ, ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ, ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರದ ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರಾದ ಜೆ.ಸಿ ಮಾಧುಸ್ವಾಮಿ, ವಸತಿ ಹಾಗೂ ತೋಟಗಾರಿಕೆ ಸಚಿವರಾದ ವಿ.ಸೋಮಣ್ಣ, ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹಾಜರಿದ್ದರು.







