ಕುಂದಾಪುರ: ಜ.6ಕ್ಕೆ ಸಿಎಎ-ಎನ್‌ಆರ್‌ಸಿ ವಿರುದ್ಧ ಸಾರ್ವಜನಿಕ ಪ್ರತಿಭಟನೆ

ಉಡುಪಿ, ಜ.2: ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಿಎಎ-ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ಜನರ ಪ್ರತಿರೋಧ ಹೆಚ್ಚುತಿದ್ದು, ಇದರ ವಿರುದ್ಧ ಜಿಲ್ಲೆಯ ಕುಂದಾಪುರದಲ್ಲೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಶಾಂತಿಯುತ ಬೃಹತ್ ಸಾರ್ವಜನಿಕ ಪ್ರತಿಭಟನೆಯನ್ನು ಇದೇ ಜ.6ರಂದು ಅಪರಾಹ್ನ 3:00 ಗಂಟೆಗೆ ಶಾಸ್ತ್ರೀ ಸರ್ಕಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಎನ್‌ಆರ್‌ಸಿ, ಸಿಎಎ ವಿರೋಧಿ ಸಮಿತಿಯ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ತಿಳಿಸಿದ್ದಾರೆ.
ದಸಂಸ, ಎಸ್‌ಡಿಪಿಐ, ಪಿಎಫ್‌ಐ, ಉಡುಪಿ ಜಿಲ್ಲಾ ಕಾಂಗ್ರೆಸ್, ಜೆಡಿಎಸ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಈ ಪ್ರತಿಭಟನೆಯಲ್ಲಿ ನಾಡಿನ ಖ್ಯಾತ ಚಿಂತಕ-ಅಂಕಣಕಾರ ಶಿವಸುಂದರ್, ವಕೀಲರಾದ ಸುಧೀರ್‌ಕುಮಾರ್ ಮರೋಳಿ ಸೇರಿದಂತೆ ಅನೇಕ ಮಂದಿ ಗಣ್ಯರು ಸಿಎಎ-ಎನ್‌ಆರ್‌ಸಿಯ ಸಾಧಕ-ಬಾಧಕಗಳ ಕುರಿತು ಸಾರ್ವಜನಿಕ ರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದವರು ಹೇಳಿದರು.
ಸಿಎಎ-ಎನ್‌ಆರ್‌ಸಿ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಗೋಲಿಬಾರ್ ನಡೆಸಿ ಇಬ್ಬರು ಅಮಾಯಕರನ್ನು ಕೊಂದಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ. ಅಲ್ಲದೇ ಸರಕಾರ ಇಬ್ಬರ ಕುಟುಂಬಗಳಿಗೆ ಘೋಷಿಸಿದ ಪರಿಹಾರವನ್ನು ಹಿಂದೆಗೆದುಕೊಂಡಿರುವುದನ್ನು ಟೀಕಿಸಿ ಅದನ್ನು ಕೂಡಲೇ ಮತ್ತೆ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಪೊಲೀಸರ ಬೇಜವಾಬ್ದಾರಿಯಿಂದ ಮಂಗಳೂರಿನಲ್ಲಿ ಎರಡು ಜೀವಗಳು ಬಲಿಯಾಗಿವೆ. ಅಂದು ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಕ್ರೌರ್ಯವನ್ನು ಖಂಡಿಸಬೇಕಾಗಿದೆ. ಗೋಲಿಬಾರ್ ಮೂಲಕ ಪೊಲೀಸರು ಇಬ್ಬರ ಕೊಲೆ ಮಾಡಿದ್ದಾರೆ ಎಂದವರು ಆರೋಪಿಸಿದರು.
ಎಸ್‌ಡಿಪಿಐ ಕರ್ನಾಟಕದ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಜಲೀಲ್ ಮಾತನಾಡಿ, ಪ್ರತಿಭಟನೆಯ ಸಂಘಟಕರಿಗೆ ಅಪರಾಹ್ನ ಅನುಮತಿ ನೀಡಿ, ರಾತ್ರಿ ವಾಪಾಸು ಪಡೆದಿದುರಿಂದ, ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದ ಅನೇಕ ತರುಣರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿ ಗುಂಪುಗೂಡಿದ್ದು, ಸುಮಾರು 40-50 ಮಂದಿ ಸೇರಿದ್ದ ಗುಂಪಿನ ಮೇಲೆ ಪೊಲೀಸರು ಯಾವುದೇ ಮಾಹಿತಿ ನೀಡದೇ ಏಕಾಏಕಿ ಲಾಠಿ ಪ್ರಹಾರ ನಡೆಸಿದ್ದೆ ಉದ್ವೇಗಕ್ಕೆ ಕಾರಣವಾಗಿ ಅದು ಮುಂದಿನ ಎಲ್ಲಾ ಘಟನೆಗಳಿಗೆ ಕಾರಣವಾಯಿತು ಎಂದವರು ಆರೋಪಿಸಿದರು.
ದೇಶಾದ್ಯಂತ ಸಿಎಎ-ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳು ನಿರಂತರವಾಗಿ ಹಾಗೂ ವ್ಯಾಪಕವಾಗಿ ನಡೆಯುತ್ತಿವೆ. ಆದರೆ ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ಮಾತ್ರ ಹಿಂಸಾಕೃತ್ಯಗಳು ಹಾಗೂ ಪೊಲೀಸ್ ದೌರ್ಜನ್ಯಗಳು ನಡೆಯುತ್ತಿವೆ. ಕರ್ನಾಟಕ, ಉತ್ತರ ಪ್ರದೇಶಗಳಲ್ಲಿ ಪೊಲೀಸರು ಮಹಿಳೆಯರು, ವಿದ್ಯಾರ್ಥಿಗಳು, ಮಕ್ಕಳೆನ್ನದೇ ಎಲ್ಲರ ಮೇಲೂ ಭಯಾನಕ ದೌರ್ಜನ್ಯ ನಡೆಸುತಿದ್ದಾರೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.
ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಯಾವುದೇ ಕ್ರಮಗಳನ್ನು ನಾಗರಿಕ ಸಮಾಜ ಒಕ್ಕೊರಲಿನಿಂದ ವಿರೋಧಿಸುತ್ತದೆ. ನಾವೆಲ್ಲರೂ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ನ್ನು ಬಹಹಿಷ್ಕರಿಸುತ್ತೇವೆ ಹಾಗೂ ತಿರಸ್ಕರಿಸುತ್ತೇವೆ. ಈ ಎಲ್ಲಾ ನಿರ್ಧಾರಗಳನ್ನು, ಕಾನೂನುಗಳನ್ನು ಹಿಂಪಡೆಯುವವರೆಗೆ ನಾಗರಿಕ ಸಮಾಜದ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಅಬ್ದುಲ್ ಜಲೀಲ್ ನುಡಿದರು.
ದಸಂಸ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್ ಮಾತನಾಡಿ, ಮಂಗಳೂರಿನಲ್ಲಿ ಗೋಲಿಬಾರ್ ಯಾಕೆ ನಡೆಯಿತು. ಅದರ ಅನಿವಾರ್ಯತೆ ಏನಿತ್ತು ಎಂಬ ಬಗ್ಗೆ ಹಾಗೂ ಪೊಲೀಸರು ಏಕಪಕ್ಷೀಯವಾಗಿ ಬಿಡುಗಡೆ ಮಾಡುತ್ತಿರುವ ವಿಡಿಯೋದೊಂದಿಗೆ ಘಟನೆಯ ಕುರಿತ ಎಲ್ಲಾ ವಿಡಿಯೋಗಳನ್ನು ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ತಾವು ಒತ್ತಾಯಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾದ್ಯಕ್ಷ ಅಮೃತ್ ಶೆಣೈ, ಜಿಲ್ಲಾ ಕಾಂಗ್ರೆಸ್‌ನ ಕಾರ್ಯದರ್ಶಿ ಹಬೀಬ್ ಅಲಿ, ಎಸ್‌ಡಿಪಿಐನ ಜಿಲ್ಲಾಧ್ಯಕ್ಷ ಕೆ.ಮುಹಮ್ಮದ್ ಆಸಿಫ್, ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಉಡುಪಿ ಶಾಖೆಯ ಜಿಲ್ಲಾಧ್ಯಕ್ಷ ನಝೀರ್ ಅಹಮ್ಮದ್ ಉಡುಪಿ ಉಪಸ್ಥಿತರಿದ್ದರು.







