ಮೋದಿ ಅವರೇ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆಂಬ ಘೋಷಣೆ ನೆನಪಿದೆಯೇ ?
ಪ್ರಧಾನಿಗೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು, ಜ. 2: ‘ಪ್ರಧಾನಿ ನರೇಂದ್ರ ಮೋದಿ ಅವರೇ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂಬ ಘೋಷಣೆ ನೆನಪಿದೆಯೇ? ಆರು ವರ್ಷಗಳಲ್ಲಿ ರೈತರ ಆದಾಯ ಹೆಚ್ಚಾಗಿಲ್ಲ, ನಷ್ಟ ದ್ವಿಗುಣವಾಗಿದೆ. ಗ್ರಾಮೀಣ ಭಾಗದಲ್ಲಿ ಜನರ ಕೊಳ್ಳುವ ಸಾಮರ್ಥ್ಯ ಶೇ.8.8ರಷ್ಟು ಕಡಿಮೆಯಾಗಿದೆ ಎಂದರೆ ಏನರ್ಥ? ಉತ್ತರ ಕೊಡಿ ಮೋದಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಬಿಎಸ್‌ವೈ ಅವರೇ ನಿಮ್ಮದೇ ಪಕ್ಷದ ಹಿರಿಯ ನಾಯಕರ ಸಾರಥ್ಯದ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ವರದಿಗಳನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತಂದು ಅವರನ್ನು ಭಾಷಣದಲ್ಲಿ ಉತ್ತರಿಸಲು ಹೇಳಿ’ ಎಂದು ಕೇಳಿದ್ದಾರೆ.
‘ಸ್ವಚ್ಛಭಾರತ್, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಮತ್ತು ನರೇಗಾ ಯೋಜನೆಗಳಿಗಾಗಿ ರಾಜ್ಯಕ್ಕೆ ನೀಡಬೇಕಾದ ಹಣದಲ್ಲಿ ಎಷ್ಟು ಸಾವಿರ ಕೋಟಿ ರೂ.ಬಾಕಿ ಇದೆ ಗೊತ್ತಾ ಮೋದಿ ಅವರೇ, ಈ ಮಾಹಿತಿಯನ್ನು ಬಿಎಸ್‌ವೈ ಅವರನ್ನೇ ಕೇಳಿ ತಿಳ್ಕೊಂಡು ರಾಜ್ಯದ ಜನತೆಗೆ ಹೇಳಿ ಬಿಡಿ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
‘ಜಿಎಸ್ಟಿ ಪರಿಹಾರ ತಿಂಗಳಿಗೆ 3,600 ಕೋಟಿ ರೂ.ಬರಬೇಕು. ಸೆಪ್ಟೆಂಬರ್‌ನಿಂದ ನಯಾಪೈಸೆ ಹಣ ಬಂದಿಲ್ಲ. ಸುಮಾರು 14-15 ಸಾವಿರ ಕೋಟಿ ರೂ.ಬಾಕಿ ಇದೆ. ಮೋದಿ ಅವರೇ ಕೇಂದ್ರ ಸರಕಾರವನ್ನು ದಿವಾಳಿ ಮಾಡ್ತಿದ್ದೀರಿ, ನಮ್ಮ ರಾಜ್ಯವನ್ನೂ ದಿವಾಳಿ ಮಾಡಲು ಹೊರಟಿದ್ದೀರಾ?’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
‘ನೆರೆಹಾವಳಿಯಿಂದ ಆಗಿರುವ ನಷ್ಟ ಅಂದಾಜು 50 ಸಾವಿರ ಕೋಟಿ ರೂ.ಗಳಿಗೂ ಅಧಿಕ. ರಾಜ್ಯ ಸರಕಾರ ಕೇಳಿದ್ದು 36 ಸಾವಿರ ಕೋಟಿ ರೂ., ಕೇಂದ್ರ ಸರಕಾರ ಕೊಟ್ಟಿದ್ದು 1,200 ಕೋಟಿ ರೂ. . ಕರ್ನಾಟಕದ ಬಗ್ಗೆ ಯಾಕೆ ತಾತ್ಸಾರ? ಎಂದು ಸಿದ್ಧರಾಮಯ್ಯ ಪ್ರಶ್ನೆ ಮಾಡಿದ್ದಾರೆ.
‘ಕೇಂದ್ರ-ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯುತ್ತೆ ಎಂದು ಭಾಷಣ ಮಾಡಿದ್ರಿ, ಅಮಾಯಕ ಜನ ನಿಮ್ಮ ಮಾತು ನಂಬಿ 25 ಸ್ಥಾನ ಗೆಲ್ಲಿಸಿಕೊಟ್ಟರು. ನಮ್ಮ ಭಾಗ್ಯದ ಬಾಗಿಲು ತೆಗೆಯಲಿಲ್ಲ, ಕರ್ನಾಟಕದ ಪಾಲಿಗೆ ನಿಮ್ಮ ಕಚೇರಿ ಬಾಗಿಲು ಮುಚ್ಚಿದ್ದೀರಿ, ಯಾಕೆ?’ ಎಂದು ಲೇವಡಿ ಮಾಡಿದ್ದಾರೆ.
‘ಆಪರೇಷನ್ ಕಮಲ ಮಾಡಿ ಹಿಂದಿನ ಬಾಗಿಲಿನಿಂದ ಸರಕಾರ ರಚಿಸುತ್ತೀರಿ, ನೈತಿಕ ರಾಜಕಾರಣದ ಬಗ್ಗೆ ಭಾಷಣ ಮಾಡ್ತೀರಿ. ರಾಜಕೀಯ ವಿರೋಧಿಗಳ ಮೇಲೆ ಐಟಿ, ಇಡಿ, ಸಿಬಿಐ ಛೂ ಬಿಡ್ತೀರಿ, ಗಣಿಕಳ್ಳರು, ಭೂಕಳ್ಳರನ್ನು ನಿಮ್ಮ ಪಕ್ಷಕ್ಕೆ ಕರೆದು ಮುದ್ದಾಡ್ತೀರಿ. ಇದೇನಾ ನಿಮ್ಮ ಸ್ವಚ್ಛ ಭಾರತ್?’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
‘ನೆರೆಹಾವಳಿಗೆ ಪರಿಹಾರ ಕೊಡಲಿಲ್ಲ, ಜಿಎಸ್ಟಿ ನಷ್ಟಕ್ಕೆ ಪರಿಹಾರ ತುಂಬಿಕೊಡಲಿಲ್ಲ, ಕೇಂದ್ರ ಅನುದಾನದಲ್ಲಿ ನಮಗೆ ನೀಡಬೇಕಾದ ನ್ಯಾಯಬದ್ಧ ಪಾಲೂ ಕೊಡಲಿಲ್ಲ ಈಗ ಯಾವ ಮುಖ ಹೊತ್ತು ರಾಜ್ಯಕ್ಕೆ ಬರ್ತಿದ್ದೀರಿ ಪ್ರಧಾನಿ ನರೇಂದ್ರ ಮೋದಿ ಅವರೇ?’
-ಸಿದ್ದರಾಮಯ್ಯ, ವಿಪಕ್ಷ ನಾಯಕ







