ಕ್ರೀಡೆ ಪಠ್ಯೇತರ ವಿಷಯವಾಗದೆ ಶಿಕ್ಷಣದ ಭಾಗವಾಗಲಿ: ಕೇಂದ್ರ ಸಚಿವ ಕಿರಣ್ ರಿಜಿಜು
ಮೂಡುಬಿದಿರೆಯಲ್ಲಿ 80ನೇ ಅ. ಭಾ. ಅಂತರ್ ವಿ.ವಿ ಕ್ರೀಡಾಕೂಟಕ್ಕೆ ಸಡಗರದ ಚಾಲನೆ

ಮೂಡುಬಿದಿರೆ: ಕೇವಲ ಆರ್ಥಿಕ, ಸಾಂಸ್ಕೃತಿಕ ರಂಗದಲ್ಲಿ ಮಾತ್ರವಲ್ಲ ಕ್ರೀಡಾಕ್ಷೇತ್ರದಲ್ಲೂ ಭಾರತದ ಸಾಧನೆ ಮುಖ್ಯ. ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಸಾಧನೆಯನ್ನು ಮೆರೆಯಲು ಈಗಾಗಲೇ ಸಜ್ಜಾಗಿದ್ದು, ಟೋಕಿಯೋ2020 ಒಲಂಪಿಕ್ಸ್ ನಲ್ಲಿ ಭಾರತ ಭಾಗಿಯಾಗಲಿದೆ. ಅಸ್ಸಾಂ, ಒಡಿಸ್ಸಾ ಪ್ರದೇಶದಲ್ಲಿ ಭಾರತೀಯ ಯುವಜನಾಂಗವನ್ನುದ್ದೇಶಿಸಿ ಕ್ರೀಡಾಕೂಟಗಳನ್ನು ಆಯೋಜಿಸಲಿದೆ. ಕ್ರೀಡೆ ಕೇವಲ ಪಠ್ಯೇತರ ವಿಷಯವಾಗಿರದೆ ಪಠ್ಯದ ಅವಿಭಾಜ್ಯ ಅಂಗವಾಗಬೇಕೆನ್ನುವ ನಿಟ್ಟಿನಲ್ಲಿ ಶಾಲೆ, ಯುವಜನಾಂಗ, ವಿಶ್ವವಿದ್ಯಾಲಯವೆಂಬ ವಿಭಾಗವನ್ನಿರಿಸಿ ಮುಂದಿನ ಕ್ರೀಡಾಕೂಟಗಳನ್ನು ನಡೆಸಲಿದ್ದೇವೆ ಎಂದು ಕೇಂದ್ರ ಯುವ ಸಬಲೀಕರಣ, ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದರು.
ಅವರು ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ಗುರುವಾರ ಸಂಜೆ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆರಂಭಗೊಂಡ ಐದು ದಿನಗಳ 80 ನೇ ಅಖಿಲ ಭಾರತ ಅಂತರ್ ವಿ.ವಿ. ಅಥ್ಲೆಟಿಕ್ ಚಾಂಪಿಯನ್‍ಶಿಪ್ ಉದ್ಘಾಟಿಸಿ ಮಾತನಾಡಿದರು.
ಭಾರತದ ಪ್ರಧಾನ ಮಂತ್ರಿಗಳು ಕ್ರೀಡಾತ್ಮಕ ನೆಲೆಯಲ್ಲಿ ಉತ್ತಮ ಚಟುವಟಿಕೆಗಳು ನಡೆಯಬೇಕೆನ್ನುವ ಉದ್ದೇಶವಿರಿಸಿ ನನಗೆ ಈ ಅಧಿಕಾರವನ್ನು ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ನಾವೀಗಾಗಲೇ ನಿರ್ಧರಿತ ಗುರಿ ಸಾಧಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ಕ್ರೀಡಾ ಕೌಶಲ್ಯದ ಕಲೆಯನ್ನು ನಾವು ಆರ್ಜಿಸಿಕೊಳ್ಳಬೇಕು. ಕ್ರೀಡಾಳುಗಳು ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಅನುಭವಿಸಬಾರದು. ಕಷ್ಠದಲ್ಲಿರುವ ಕ್ರೀಡಾ ಸಾಧಕರು ಹಾಗೂ ಅವರ ಕುಟುಂಬ ವರ್ಗದವರಿಗೆ ಆರ್ಥಿಕ, ಆರೋಗ್ಯ ಇತರ ಸೌಲಭ್ಯವನ್ನು ನಾವು ಕೊಡಲಿದ್ದೇವೆ. ಆಟಗಾರರೇ ನಮ್ಮ ದೇಶದ ತಾರೆಗಳು. ಭಾರತದ ವಾಣಿಜ್ಯ ಜಗತ್ತು ವಿಶ್ವವಿದ್ಯಾಲಯದ ಜೊತೆಗೆ ಸೇರಿಕೊಂಡು ಕ್ರೀಡಾಭಿವೃದ್ದಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಜೀವನಕ್ಕೆ ಕ್ರೀಡೆಯು ಅತೀ ಅಗತ್ಯವಾದ್ದರಿಂದ ಕ್ರೀಡೆ ಕೇವಲ ಹುದ್ದೆ, ಹವ್ಯಾಸವಾಗದೆ ಸಂಸ್ಕೃತಿಯಾಗಬೇಕು. ರಾಮಾಯಣ, ಮಹಾಭಾರತ ಕಾಲದಿಂದ ವಿವಿಧ ಕ್ರೀಡೆಗಳು ಭಾರತದಲ್ಲಿ ಚಲಾವಣೆಯಲ್ಲಿದ್ದವು. ಆದರೆ ನಾವದನ್ನು ಮುಂದುವರೆಸಲಿಲ್ಲ. ಹೊಸ ಭಾರತ ಸದೃಢಭಾರತವಾಗಬೇಕು. ಸದೃಢ ಭಾರತ ಚಳುವಳಿ ಅದು ಜನರ ಚಳುವಳಿಯಾಗಬೇಕಾದರೆ ಭಾರತಕ್ಕೆ ಯುವಜನಾಂಗ ವರದಾನವಾಗಬೇಕಾಗಿದೆ ಎಂದು ಹೇಳಿದರು.
ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸತೀಶ್‍ರೈ, ಅಶ್ವಿನಿ ಅಕ್ಕುಂಜೆ, ಹಾಗೂ ಎಂ.ಆರ್.ಪೂವಮ್ಮ, ಮೋಹನ್, ಧಾರುಣ್ ಅಯ್ಯಸಾಮಿ ಪರವಾಗಿ ಪೋಷಕರನ್ನು ವಿಶೇಷವಾಗಿ ನಗದು ಪುರಸ್ಕಾರದೊಂದಿಗೆ ಸಮ್ಮಾನಿಸಲಾಯಿತು.
ಮಂಗಳೂರು ವಿವಿಯ ಮನೀಶ್ ಸಿಂಗ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಕ್ರೀಡಾ ವಿದ್ಯಾರ್ಥಿಗಳು ಸಚಿವರಿಗೆ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು.
ರಾಜೀವ್‍ಗಾಂದಿ ಆರೋಗ್ಯ ವಿಜ್ಞಾನ ವಿ.ವಿಯ ಕುಲಪತಿ ಡಾ.ಎಸ್. ಸಚ್ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಂಸ್ಕೃತಿ ಸಚಿವ ಸಿ.ಟಿ.ರವಿ, ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್, ರಘುಪತಿ ಭಟ್, ಮಾಜಿ ಸಚಿವರಾದ ಅಭಯಚಂದ್ರಜೈನ್ ಹಾಗೂ ಅಮರನಾಥ ಶೆಟ್ಟಿ, ರಮಾನಾಥ ರೈ, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ಕಿಶೋರ್ ಆಳ್ವ, ಸುರೇಶ್ ಶೆಟ್ಟಿ, ರವೀಂದ್ರ ಆಳ್ವ, ಕೆನರಾ ಬ್ಯಾಂಕಿನ ಜಿ.ಎಂ.ಯೋಗೀಶ ಆಚಾರ್ಯ ಆರ್ ಜಿಯುಎಚ್‍ಎಸ್‍ನ ಕುಲಸಚಿವ ಡಾ.ಶಿವಾನಂದ ಕಪಾಶಿ, ಮೌಲ್ಯಮಾಪನ ವಿಭಾಗ ಕುಲಸಚಿವ ಡಾ.ಕೆ.ಬಿ.ಲಿಂಗೇಗೌಡ, ಡೆಪ್ಯುಟಿ ರಿಜಸ್ಟ್ರಾರ್ ವಸಂತ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮ್ಯಾನೇಜ್‍ಮೆಂಟ್ ಟ್ರಸ್ಟೀ ವಿವೇಕ್ ಆಳ್ವ, ಟ್ರಸ್ಟೀ ವಿನಯ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಪ್ರಾಧ್ಯಾಪಕ ರಾಜೇಶ್ ಡಿಸೋಜಾ, ರೂಬಿ ಕುಮಾರ್ ಮುತ್ತು ಎಂ.ಎಲ್ ಕಾರ್ಯಕ್ರಮ ನಿರೂಪಿಸಿದರು.
ವರ್ಣರಂಜಿತ ಆರಂಭ..
* 350ಕ್ಕೂ ಅಧಿಕ ವಿವಿಗಳ 4500ರಕ್ಕೂ ಮಿಕ್ಕಿದ ದಾಖಲೆಯ ಕ್ರೀಡಾಪಟುಗಳ ಪಥ ಸಂಚಲನ.
* ಸಿಡಿದ ಕದೋನಿಗಳು, ಬಾನಂಗಳದಲ್ಲಿ ಸಿಡಿಮದ್ದಿನ ಚಿತ್ತಾರ
* ಸಚಿವರು, ಗಣ್ಯರಿಂದ ಆಗಸಕ್ಕೆ ಚಿಮ್ಮಿದ ತ್ರಿವರ್ಣದ ಬಲೂನು ಗುಚ್ಛಗಳು
* ಟ್ರ್ಯಾಕ್‍ನಲ್ಲಿ ಸಾಗಿ ಬಂದ ಸಾಂಸ್ಕೃತಿಕ ಲೋಕ, ದೇಶ, ನಾಡಿನ ಕಲಾ ವೈವಿಧ್ಯ
* 4ನೇ ಬಾರಿಗೆ ಕ್ರೀಡಾ ಕೂಟ ಸಂಘಟಿಸಿ ದಾಖಲೆ ಬರೆದ ಅತಿಥೇಯ ಆಳ್ವಾಸ್
* ಹೊನಲು ಬೆಳಕಿನಲ್ಲಿ ರಂಗೇರಿದ ಕ್ರೀಡಾಂಗಣ, ಎಲ್ಲೆಡೆ ವರ್ಣಾಲಂಕಾರ
* ದಿನದ ಕೊನೆಯಲ್ಲಿ ದೇಶೀ ಸಾಂಸ್ಕೃತಿಕ ವೈವಿಧ್ಯ
ಹೊಸ ವರ್ಷದ ಆರಂಭ ಕೇವಲ ಕ್ರೀಡಾಚಟುವಟಿಕೆ ಮಾತ್ರವಲ್ಲ ಸಾಂಸ್ಕೃತಿಕ ವೈಭವದಿಂದ ಆರಂಭಗೊಂದೆ. ನಾನು ಇಂದು ನಡೆದ ಪಥಸಂಚಲನದಲ್ಲಿ ಸಂಪೂರ್ಣ ಕರ್ನಾಟಕವನ್ನು ನೋಡಿದೆ. ಈ ಕ್ರೀಡಾಕೂಟದ ಚಾಲನೆ ಈವರೆಗೆ ನಾನು ಕಂಡಿರದ ಅಮೋಘ ಅನುಭವವಾಗಿದ್ದು ಭಾರತ ಮುಂದೆ ಒಲಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಲಕ್ಷಣ ಕಾಣುತ್ತಿದೆ. ಇದಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ನಂಬಿಕಾರ್ಹ ಕೊಡುಗೆಯೇ ಕಾರಣ.
- ಕಿರೆಣ್ ರಿಜಿಜು







