ಅಂತರ್ ನಿಗಮ ವರ್ಗಾವಣೆ ಸ್ಥಗಿತ: ಆತಂಕದಲ್ಲಿ ಸಾವಿರಾರು ನೌಕರರು
ಬೆಂಗಳೂರು, ಡಿ.2: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಂತರನಿಗಮ ವರ್ಗಾವಣೆ ಸ್ಥಗಿತಗೊಳಿಸಲಾಗಿದ್ದು, ಸ್ವಂತ ಜಿಲ್ಲೆಯಲ್ಲಿಯೇ ಕೆಲಸ ಮಾಡಬೇಕು ಎಂದುಕೊಳ್ಳುತ್ತಿದ್ದ ಸಾವಿರಾರು ನೌಕರರು ಪರಿತಪಿಸುವಂತಾಗಿದೆ.
ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಕೆಎಸ್ಸಾರ್ಟಿಸಿ, ಬಿಎಂಎಟಿಸಿಗಳಲ್ಲಿ ಉತ್ತರ ಕರ್ನಾಟಕದ ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ. ಕೆಎಸ್ಸಾರ್ಟಿಸಿ ಅಥವಾ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ವರ್ಗಾವಣೆ ಮಾಡಿಸಿಕೊಳ್ಳುವ ಸಲುವಾಗಿ ನಾಲ್ಕು ವರ್ಷದ ಹಿಂದೆ ಅಂತರ ನಿಗಮ ವರ್ಗಾವಣೆ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಆದರೆ, ಈಗ ಅದು ಪೂರ್ಣವಾಗುವ ಮೊದಲೇ ಸ್ಥಗಿತ ಮಾಡಿದ್ದಾರೆ.
3,589 ನೌಕರರಿಗಷ್ಟೇ ವರ್ಗಾವಣೆ: ಸಾರ್ವಜನಿಕ ಸಾರಿಗೆಯ ನಾಲ್ಕು ನಿಗಮಗಳಿಂದ ಒಟ್ಟು 18 ಸಾವಿರ ನೌಕರರು ಬೇರೆ ಬೇರೆ ಅಂತರ ನಿಗಮ ವರ್ಗಾವಣೆ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 4 ಸಾವಿರ ನೌಕರರು ವರ್ಗಾವಣೆಗೆ ಅರ್ಹರಾಗಿಲ್ಲ ಎಂದು ತಿರಸ್ಕಾರ ಮಾಡಲಾಗಿದೆ. ಉಳಿದ 14 ಸಾವಿರ ನೌಕರರ ಪೈಕಿ 3859 ನೌಕರರನ್ನು ಅಷ್ಟೇ ವರ್ಗಾವಣೆಗೆ ಅರ್ಹರನ್ನಾಗಿಸಲಾಗಿದೆ. ಉಳಿದ ನೌಕರರನ್ನು ಕೋರಿಕೆ ಮೇರೆಗೆ ವರ್ಗಾವಣೆ ಮಾಡಬೇಕಿದೆ.
ಹೊಸದಾಗಿ ಹುದ್ದೆ ಭರ್ತಿ?: ಅಂತರ ನಿಗಮ ವರ್ಗಾವಣೆ ಬಾಕಿಯಿರುವಾಗಲೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಖಾಲಿಯಿರುವ ಚಾಲಕ ಮತ್ತು ನಿರ್ವಾಹಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ ಮಾಡಿದೆ. ಅದರಂತೆ ನಿಗಮ ವ್ಯಾಪ್ತಿಯಲ್ಲಿನ 9 ವಿಭಾಗ ವ್ಯಾಪ್ತಿಯಲ್ಲಿ ಖಾಲಿಯುಳ್ಳ 2, 555 ಚಾಲಕ ಮತ್ತು 255 ಚಾಲಕ ಕಂ ನಿರ್ವಾಹಕ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಒಟ್ಟು 2,814 ಹುದ್ದೆಗಳಿಗೆ ಹೊಸಬರನ್ನು ನೇಮಿಸಿಕೊಂಡರೆ ವರ್ಗಾವಣೆ ಬಯಸುತ್ತಿರುವವರಿಗೆ ಅನ್ಯಾಯವಾಗಲಿದೆ ಎಂಬ ಆರೋಪ ಕೇಳಿಬಂದಿದೆ.
ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಕೆಎಸ್ಸಾರ್ಟಿಸಿಯಲ್ಲಿ ಅಂತರ್ ನಿಗಮ ವರ್ಗಾವಣೆಗೆ ಯಾವುದೇ ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕುರಿತು ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದು, ವರ್ಗಾವಣೆ ಬಯಸಿರುವ ನೌಕರರಿಗೆ ಪರ್ಯಾಯ ಮಾರ್ಗವೇನು ಎಂಬುದನ್ನು ತಿಳಿಸುವಂತೆ ಮನವಿ ಮಾಡಲಾಗಿದೆ.







