ಸಿಎಎ ವಿರೋಧಿಸುವವರು ‘ನಗರ ನಕ್ಸಲರು’: ಬಿಜೆಪಿ ನಾಯಕ ವಿನಯ್ ತೆಂಡೂಲ್ಕರ್

ಫೋಟೊ ಕೃಪೆ: Twitter
ಪಣಜಿ, ಜ. 2: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರನ್ನು ಗೋವಾ ಬಿಜೆಪಿಯ ವರಿಷ್ಠ ವಿನಯ್ ತೆಂಡೂಲ್ಕರ್ ‘ನಗರ ನಕ್ಸಲರು’ ಎಂದು ಕರೆದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಟೀಕಿಸುತ್ತಿರುವ ಕಾಂಗ್ರೆಸ್ ಹಾಗೂ ವಿವಿಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಈ ಪಕ್ಷಗಳು ‘ವಿರೋಧಕ್ಕಾಗಿ’ ವಿರೋಧಿಸುತ್ತಿವೆ ಎಂದರು.
‘‘ಪೌರತ್ವ ತಿದ್ದುಪಡಿ ಕಾಯ್ದೆಗೆ ಅಮೆರಿಕ ಹಾಗೂ ಇಂಗ್ಲೆಂಡ್ನಂತಹ ದೇಶಗಳ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಭಾರತದಲ್ಲಿ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿ ಸೇರಿ ಕೆಲವು ರಾಜಕೀಯ ಪಕ್ಷಗಳು ನಗರ ನಕ್ಸಲರಂತೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವುದಕ್ಕಾಗಿ ವಿರೋಧಿಸುತ್ತಿದ್ದಾರೆ. ಅವರು ಕಾಯ್ದೆಯನ್ನು ಅರ್ಥ ಮಾಡಿಕೊಳ್ಳದೆ ವಿರೋಧಿಸುತ್ತಿದ್ದಾರೆ’’ ಎಂದರು. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಗೋವಾದಲ್ಲಿ ಹೆಚ್ಚು ವಿರೋಧ ವ್ಯಕ್ತವಾಗಿಲ್ಲ. ಆದುದರಿಂದ ಇಲ್ಲಿ ಈ ಕಾಯ್ದೆ ಕುರಿತು ಜನರನ್ನು ದಾರಿ ತಪ್ಪಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜಾಗೃತಿ ಮೂಡಿಸಲು ಬಿಜೆಪಿಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಶುಕ್ರವಾರ ಆಝಾದ್ ಮೈದಾನದಲ್ಲಿ ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು.





