ರಾಹುಲ್ ಪತ್ರ ಟ್ಯಾಗ್: ಪಿಣರಾಯಿ ವಿಜಯನ್ ವಿರುದ್ಧ ಕಾಂಗ್ರೆಸ್ ಆಕ್ರೋಶ

ತಿರುವನಂತಪುರ, ಜ. 2: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕ ಕೇರಳ ಸಭಾ (ಎಲ್‌ಕೆಬಿ) ಕುರಿತು ಬರೆದ ಪತ್ರವನ್ನು ತನ್ನ ಟ್ವಿಟರ್ ಪೇಜ್‌ನಲ್ಲಿ ಟ್ಯಾಗ್ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕೇರಳ ಕಾಂಗ್ರೆಸ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ತಿರುವನಂತಪುರದಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶ ಲೋಕ ಕೇರಳ ಸಭಾಕ್ಕೆ ಶುಭಾಶಯಗಳು ಎಂದು ರಾಹುಲ್ ಗಾಂಧಿ ಬರೆದ ಪತ್ರವನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿ ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ ಕೇರಳ ಕಾಂಗ್ರೆಸ್ ಪಿಣರಾಯಿ ವಿಜಯನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಎರಡು ವರ್ಷಗಳಿಗೆ ಒಮ್ಮೆ ಕೇರಳ ಸರಕಾರ ಆಯೋಜಿಸುವ ಈ ಕಾರ್ಯಕ್ರಮ ಜಗತ್ತಿನಾದ್ಯಂತ ಇರುವ ಕೇರಳೀಯರಿಗೆ ಒಗ್ಗೂಡಲು ಒಂದು ಉತ್ತಮ ವೇದಿಕೆ. ಈ ಕಾರ್ಯಕ್ರಮದ ಎರಡನೇ ಆವೃತ್ತಿ ಜನವರಿ 1ರಂದು ತಿರುವನಂತಪುರದಲ್ಲಿ ನಡೆದಿತ್ತು. ಲೋಕ ಕೇರಳ ಸಭಾದ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡುವ ಮುನ್ನ ಪಿಣರಾಯಿ ವಿಜಯನ್, ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಪತ್ರವನ್ನು ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿದ್ದರು. ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಲೋಕ ಕೇರಳ ಸಭಾದ ಸಮಾವೇಶವನ್ನು ಬಹಿಷ್ಕರಿಸಿತ್ತು. ಸರಕಾರಕ್ಕೆ ವೇತನ ನೀಡಲು ನಿಧಿ ಇಲ್ಲದೇ ಇದ್ದ ಸಂದರ್ಭ ಈ ಅದ್ಧೂರಿಯ ಸಮಾವೇಶ ನಡೆಸುವ ಅಗತ್ಯ ಇಲ್ಲ ಎಂದು ಯುಡಿಎಫ್ ಹೇಳಿತ್ತು.
ರಾಹುಲ್ ಗಾಂಧಿ ಅವರು ಡಿಸೆಂಬರ್ 12ರಂದು ಈ ಪತ್ರ ರವಾನಿಸಿದ್ದರು. ಅನಂತರ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಯುಡಿಎಫ್ ಲೋಕ ಕೇರಳ ಸಭಾದಿಂದ ದೂರ ಉಳಿಯುವ ನಿರ್ಧಾರವನ್ನು ಡಿಸೆಂಬರ್ 20ರಂದು ಕೈಗೊಂಡಿತ್ತು. ಆದರೆ, ಪಿಣರಾಯಿ ವಿಜಯನ್ ರಾಹುಲ್ ಗಾಂಧಿ ಅವರ ಪತ್ರವನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ ಎಂದು ಪ್ರತಿಪಕ್ಷದ ನಾಯಕರಾದ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.







