ಶುಶ್ರೂಷಕಿಯರಿಗೆ ಸಹಕಾರ ನೀಡಲು ಸರಕಾರ ಬದ್ಧ: ಡಾ.ಅಶ್ವಥ್ ನಾರಾಯಣ

ಬೆಂಗಳೂರು, ಜ.2: ವೃತ್ತಿಪರ ಶುಶ್ರೂಷಕಿಯರಿಗೆ ಸರಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.
ಗುರುವಾರ ನಗರದ ಪುರಭವನದಲ್ಲಿ ಶುಶ್ರೂಷ ತರಬೇತಿ ಪಡೆದ ಶುಶ್ರೂಷಕರ ಸಂಘ(ಟಿಎನ್‌ಎಐ)ದ ವತಿಯಿಂದ ಆಯೋಜಿಸಿದ್ದ ಫ್ಲಾರೆನ್ಸ್ ನೈಟಿಂಗೇಲ್ ಅವರ 200 ನೇ ಜನ್ಮದಿನೋತ್ಸವದ ಅಂಗವಾಗಿ ಶುಶ್ರೂಷಕರು ಮತ್ತು ಮಿಡ್‌ವೈಫ್ ನರ್ಸ್‌ಸ್ ವರ್ಷ ಘೋಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಸಮಾಜದಲ್ಲಿ ನರ್ಸ್‌ಗಳಿಗೆ ವಿಶೇಷ ಸ್ಥಾನಮಾನವಿದ್ದು, ಒಂದು ಮಗು ಜನನದ ವೇಳೆ ಅವರ ಪಾತ್ರ ಗಮನಾರ್ಹವಾದುದು. ಈ ನಿಟ್ಟಿನಲ್ಲಿ ಅವರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಸದಾ ಬದ್ಧವಾಗಿದೆ. ಶುಶ್ರೂಷಕರ ಅಭಿವೃದ್ಧಿಗಾಗಿ ಹೆಚ್ಚಿನ ಹಣ ಮೀಸಲಿಡಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಇಂದಿನ ವ್ಯವಸ್ಥೆಯೊಳಗೆ ಆರೋಗ್ಯ ಸೇವೆಯು ಕೇವಲ ನಗರ, ಪಟ್ಟಣಗಳಿಗೆ ಸೀಮಿತವಾಗುತ್ತಿದೆ. ಗ್ರಾಮಾಂತರ ಪ್ರದೇಶಕ್ಕೆ ಇನ್ನೂ ಸಂಪೂರ್ಣವಾಗಿ ತಲುಪಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸುವ ಮೂಲಕ ಗ್ರಾಮೀಣ ಪ್ರದೇಶಕ್ಕೂ ಆರೋಗ್ಯ ಸೇವೆ ತಲುಪುವಂತೆ ಮಾಡಬೇಕು. ವೈದ್ಯರು ಹಾಗೂ ಶುಶ್ರೂಷಕಿಯರು ಇದನ್ನು ಮಾಡಬೇಕು ಎಂದು ಹೇಳಿದರು.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ಶುಶ್ರೂಷಕಿಯರು ಒಬ್ಬ ರೋಗಿಗೆ ತಾಯಿ, ಮಗಳು, ಮಡದಿ, ಅಣ್ಣ-ತಮ್ಮನಾಗಿ ಸೇವೆ ಸಲ್ಲಿಸುತ್ತಾರೆ. ಅಲ್ಲದೆ, ಅವರು ಸಮಾಧಾನ ಹೇಳುವ ಆಪ್ತ ಸಮಾಲೋಚಕರಾಗಿ, ನ್ಯಾಯವಾದಿಯಾಗಿ, ಟೀಚರ್ ಸೇರಿದಂತೆ ಹಲವು ರಂಗಗಳಲ್ಲಿ ಒಬ್ಬ ರೋಗಿಯನ್ನು ನೋಡಿಕೊಳ್ಳುತ್ತಾರೆ ಎಂದು ಬಣ್ಣಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಶುಶ್ರೂಷಕಿಯರ ಸೇವೆಯನ್ನು ಗುರುತಿಸಿವೆ ಎಂದ ಅವರು, ಕೇಂದ್ರ ಸರಕಾರ ನೀಡುವ ಫ್ಲಾರೆನ್ಸ್ ನೈಟಿಂಗೇಲ್ ಹೆಸರಿನ ಪ್ರಶಸ್ತಿಯನ್ನು 100 ಜನರಿಗೆ ನೀಡಬೇಕು ಎಂದು ಬೇಡಿಕೆಯಿಟ್ಟಾಗ ಅದನ್ನು 35 ರಿಂದ 51 ಕ್ಕೆ ಹೆಚ್ಚಳ ಮಾಡಲಾಗಿದೆ. ಅದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಶುಶ್ರೀಷ ಪರಿಷತ್ತಿನ ಅಧ್ಯಕ್ಷ ಡಾ.ಟಿ.ದಿಲೀಪ್ ಕುಮಾರ್, ಪರಿಸರವಾದಿ ಸಾಲುಮರದ ತಿಮ್ಮಕ್ಕ, ಟಿಎನ್‌ಎಐನ ರಾಷ್ಟ್ರೀಯ ಅಧ್ಯಕ್ಷ ಡಾ.ರಾಯ್ ಕೆ. ಜಾರ್ಜ್, ರಾಜ್ಯಾಧ್ಯಕ್ಷ ಡಾ.ಎ.ಟಿ.ಎಸ್.ಗಿರಿ, ಕಾರ್ಯದರ್ಶಿ ಪ್ರೊ.ಗಿರಿಜಾಂಬದೇವಿ ಸೇರಿದಂತೆ ಮತ್ತಿತರರಿದ್ದರು.
ದೇಶದ ಎಲ್ಲೆಡೆ ಖಾಸಗಿ ನರ್ಸಿಂಗ್ ಕಾಲೇಜುಗಳು ಭಾರತೀಯ ಶುಶ್ರೂಷ ಪರಿಷತ್ತು ನಿಯಂತ್ರಣದಲ್ಲಿರಬೇಕು. ವಿದ್ಯಾರ್ಥಿಗಳಿಗೆ ಎಂತಹ ಪಠ್ಯವಿರಬೇಕು ಸೇರಿದಂತೆ ನರ್ಸಿಂಗ್‌ನ ಶಿಕ್ಷಣ ನೀತಿ ಪರಿಷತ್ತು ತೀರ್ಮಾನ ಮಾಡುತ್ತದೆ. ಈ ಬಗ್ಗೆ ನ್ಯಾಯಾಲಯಗಳೂ ಮಾತನಾಡಬೇಕಿದೆ. ಆ ಮೂಲಕ ಆರೋಗ್ಯಕರವಾದ ನರ್ಸ್‌ಗಳನ್ನು ಸಮಾಜಕ್ಕೆ ನೀಡಬಹುದಾಗಿದೆ.
-ವಿ.ಗೋಪಾಲಗೌಡ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ







