ಬೆಳಗಾವಿಯ ಒಂದಿಂಚು ಜಾಗ ಬಿಟ್ಟುಕೊಡುವುದಿಲ್ಲ: ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ
ಬೆಳಗಾವಿ, ಜ.2: ಬೆಳಗಾವಿಯ ಒಂದಿಂಚು ಜಾಗವನ್ನು ಮಹಾರಾಷ್ಟ್ರ ಕಬಳಿಸಲು ಸಾಧ್ಯವಿಲ್ಲ. ಈ ಬಗ್ಗೆ ಮಾಹಾರಾಷ್ಟ್ರ ಸರಕಾರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅರ್ಥ ಮಾಡಿಕೊಳ್ಳಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ನಾರಾಯಣಗೌಡ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗಡಿವಿಚಾರ ಮುಗಿದು ಹೋದ ವಿಚಾರ. ಶಿವಸೇನೆ ಗಡಿ ವಿಷಯವನ್ನು ಪದೇ ಪದೇ ತೆಗೆದು ರಾಜಕೀಯ ಲಾಭಕೋಸ್ಕರ ಬಳಸಿಕೊಳ್ಳುತ್ತಿದೆ. ಬೆಳಗಾವಿಯಲ್ಲಿನ ಮರಾಠಿಗರು ಹಾಗೂ ಕನ್ನಡಿಗರು ಸಹೋದರ ಭಾವನೆಯಿಂದ ನೆಲೆಸಿದ್ದಾರೆ. ಅವರ ನಡುವೆ ವಿಷ ಬೀಜ ಬಿತ್ತಬಾರದು ಎಂದು ತಿಳಿಸಿದರು.
ಬೆಳಗಾವಿ ಗಡಿ ವಿಷಯವನ್ನು ಪದೇ ಪದೇ ಕೆಣಕಿದರೆ ಸರಿಯಿರಲ್ಲ. ಬೆಳಗಾವಿ ಕರ್ನಾಟಕ ಅವಿಭಾಗ್ಯ ಅಂಗವಾಗಿದ್ದು, ಇದನ್ನು ರಾಜಕೀಯಕ್ಕೆ ಬಳಸಿಕೊಂಡರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಕರ್ನಾಟಕ ಸರಕಾರ ಗಡಿ ಪ್ರಾಧಿಕಾರವನ್ನು ರಚಿಸಿ ಒಬ್ಬ ಸಚಿವರಿಗೆ ಈ ಪ್ರಾಧಿಕಾರದ ಜವಾಬ್ದಾರಿಯನ್ನು ಕೊಟ್ಟು ಸೂಕ್ತವಾಗಿ ನಿಭಾಯಿಸಬೇಕೆಂದು ಅವರು ಮನವಿ ಮಾಡಿದರು.





