ಜ.5ರಂದು ಚಿತ್ರಸಂತೆ: 17 ರಾಜ್ಯಗಳ 1500 ಕಲಾವಿದರಿಂದ ಕಲಾಕೃತಿಗಳ ಪ್ರದರ್ಶನ

ಬೆಂಗಳೂರು, ಜ.2: ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ 17ನೇ ಚಿತ್ರಸಂತೆ ಕಾರ್ಯಕ್ರಮವನ್ನು ಜ.5ರಂದು ರವಿವಾರ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಚಿತ್ರಕಲಾ ಪರಿಷತ್‌ನ ಆವರಣ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದ್ದಾರೆ.
ಗುರುವಾರ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಶಿವಾನಂದ ಸರ್ಕಲ್‌ನಿಂದ ವಿಂಡ್ಸರ್ ಮ್ಯಾನರ್, ಕ್ರೆಸೆಂಟ್ ರಸ್ತೆಯಲ್ಲಿ ಕಲಾಕೃತಿಗಳ ಪ್ರದರ್ಶನವಿರುತ್ತದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಜಾರ್ಖಂಡ್, ಸಿಕ್ಕಿಂ ಸೇರಿದಂತೆ 17 ರಾಜ್ಯಗಳ 1500 ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿತ್ರಸಂತೆಯನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಸಿ.ಎನ್.ಅಶ್ವಥ್ ನಾರಾಯಣ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ.ಮೋಹನ್, ಶಿಕ್ಷಣ ತಜ್ಞ ಪ್ರೊ.ಪ್ರಭಾಕರ್ ಕೋರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ರಿಝ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಬಾರಿಯ ಚಿತ್ರಸಂತೆಯನ್ನು ನೇಗಿಲಯೋಗಿ ರೈತರಿಗೆ ಸಮರ್ಪಿಸಲಾಗಿದ್ದು, ಗ್ರಾಮೀಣ ಜನರ ಬದುಕಿನ ಜೀವನಶೈಲಿಯನ್ನು ಪ್ರತಿಬಿಂಬಿಸುವ ‘ಗ್ರಾಮ ಸ್ವರಾಜ್ಯ’ ಪ್ರದರ್ಶನವನ್ನು ಆಯೋಜಿಸಿದ್ದು, ಇದನ್ನು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್‌ನ ಸಹಯೋಗದೊಂದಿಗೆ ರಾಜ್ಯದ ವಿವಿಧ ಐತಿಹಾಸಿಕ ಸ್ಥಳಗಳಲ್ಲಿ ಖ್ಯಾತ ಕಲಾವಿದರಿಂದ ಪ್ರಕೃತಿ ದೃಶ್ಯ ಚಿತ್ರಣ(ಲ್ಯಾಂಡ್ ಸ್ಕೇಪ್) ಕಲಾಕೃತಿಗಳನ್ನು ತಯಾರಿಸಿ ಅವುಗಳನ್ನು ಚಿತ್ರಸಂತೆಯಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಇದರಿಂದ ನಾಡಿನ ವಿವಿಧ ಐತಿಹಾಸಿಕ ಸ್ಥಳಗಳ ಮಾಹಿತಿ, ಸೌಂದರ್ಯದ ಕುರಿತು ಜಗತ್ತಿಗೆ ತಿಳಿಸುವಂತಹ ಉತ್ತಮ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದರು.
ಕಲಾಕೃತಿಗಳನ್ನು ಕೊಳ್ಳಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಚಿತ್ರಕಲಾ ಕ್ಷೇತ್ರದ ಆವರಣದಲ್ಲಿಯೇ ಸ್ಟೇಟ್ ಬ್ಯಾಂಕ್ ಇಂಡಿಯಾದ ಎಟಿಎಂ ಹಾಗೂ ಕೆನರಾ ಬ್ಯಾಂಕ್‌ನ ಸಂಚಾರಿ ಎಟಿಎಮ್‌ಗಳು ಕಾರ್ಯನಿರ್ವಹಿಸುತ್ತವೆ. ಸುರಕ್ಷತೆಯ ದೃಷ್ಟಿಯಿಂದ ಚಿತ್ರಸಂತೆಯ ವ್ಯಾಪ್ತಿ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ತೇಜೇಂದ್ರ ಸಿಂಗ್ ಬಾವ್ನಿ, ಸದಸ್ಯರಾದ ತಾರಾಕೇಶ್ವರಿ, ಪ್ರಭುದೇವ್ ಆರಾದ್ಯಾ, ಜಿ.ಎನ್.ಸತ್ಯನಾರಾಯಣ, ಅರುಣ್‌ಕುಮಾರ್ ರಾಜ್, ಬಿ.ವೈ.ವಿನೋದ್ ಮತ್ತಿತರರಿದ್ದರು.
ಚಿತ್ರಸಂತೆಯ ವಿಶೇಷತೆಗಳು
-ಕುಮಾರಕೃಪಾ ರಸ್ತೆ, ಗಾಂಧಿ ಭವನದ ಸುತ್ತಮುತ್ತ ರಸ್ತೆಗಳು ವಾಹನ ಸಂಚಾರದಿಂದ ಮುಕ್ತವಾಗಲಿದ್ದು, ರಸ್ತೆ ಬದಿಯಲೆಲ್ಲಾ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.
-ಚಿತ್ರಸಂತೆಗೆ 2 ರಿಂದ 3 ಲಕ್ಷಕ್ಕೂ ಹೆಚ್ಚು ಚಿತ್ರಾಸಕ್ತರು ಬರುವ ನಿರೀಕ್ಷೆಯಿದೆ.
-ದೇಶದಲ್ಲೇ ಅತಿದೊಡ್ಡ ಚಿತ್ರಸಂತೆ ಇದಾಗಿದೆ.
-ದೇಶದ ಹಿರಿಯ ಚಿತ್ರಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಲಿದ್ದಾರೆ.
-ಕಲಾಕೃತಿಗಳು ಸುಮಾರು 100ರೂ.ನಿಂದ ಪ್ರಾರಂಭಗೊಂಡು ಲಕ್ಷಾಂತರ ರೂ.ವರೆಗೂ ಮಾರಾಟವಾಗುವ ನಿರೀಕ್ಷೆಯಿದೆ.
-ಚಿಂತ್ರಸಂತೆಯಲ್ಲಿ ಒಂದೇ ದಿನಕ್ಕೆ ಎರಡು-ಮೂರು ಕೋಟಿ ರೂ.ವ್ಯವಹಾರ ಆಗಲಿದೆ.
ನಾಳೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ
ಚಿತ್ರಕಲಾ ಪರಿಷತ್ ಆಯೋಜಿಸುವ ಚಿತ್ರಸಂತೆಯ ಪ್ರಯುಕ್ತ ಜ.4ರಂದು ಸಂಜೆ 5ಕ್ಕೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದ್ದು, ಪ್ರೊ. ಎಂ.ಎಸ್.ನಂಜುಂಡರಾವ್ ಪ್ರಶಸ್ತಿಯನ್ನು ಚೆನ್ನೈನ ಹಿರಿಯ ಕಲಾವಿದ ಆರ್.ಬಿ. ಭಾಸ್ಕರನ್‌ಗೆ, ಎಚ್.ಕೆ.ಕೇಜ್ರಿವಾಲ್ ಪ್ರಶಸ್ತಿಯನ್ನು ಎಚ್.ಎನ್.ಸುರೇಶ್‌ಗೆ, ಎಂ.ಆರ್ಯಮೂರ್ತಿ ಪ್ರಶಸ್ತಿಯು ಚಿತ್ರಕಲಾವಿದ ಎಂ.ಕೃಷ್ಣಪ್ಪ, ಡಿ.ದೇವರಾಜ ಅರಸು ಪ್ರಶಸ್ತಿಯು ಗಣೇಶ ಸೋಮಯಾಜಿಗೆ ಹಾಗೂ ವೈ.ಸುಬ್ರಹ್ಮಣ್ಯರಾಜು ಪ್ರಶಸ್ತಿಯನ್ನು ಸಾಂಪ್ರದಾಯಿಕ ಕಲಾವಿದ ವಿಜಯ ಹಾಗರಗುಂಡಗಿಗೆ ಪ್ರದಾನ ಮಾಡಲಾಗುತ್ತಿದೆ.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಪ್ರದಾನ ಮಾಡಲಿದ್ದಾರೆ. ಇದೇ ವೇಳೆ ರುಮಾಲೆ ಚೆನ್ನಬಸವಯ್ಯರ ನೆನಪಿನಲ್ಲಿ ಬೆಂಗಳೂರು ಲ್ಯಾಂಡ್ ಸ್ಕೇಪ್ ಚಿತ್ರಪ್ರದರ್ಶನ ಉದ್ಘಾಟನೆಯನ್ನು ಶಿಕ್ಷಣ ತಜ್ಞ ಪ್ರೊ.ಪ್ರಭಾಕರ್ ಕೋರೆ ಮಾಡಲಿದ್ದಾರೆ.







