ಮಂಗಳೂರು ಗೋಲಿಬಾರ್ ಗೆ ಬಲಿಯಾದವರ ಕುಟುಂಬಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಧರಣಿ

ಮಂಗಳೂರು: ಮಂಗಳೂರು ಗೋಲಿಬಾರ್ ಗೆ ಬಲಿಯಾದವರ ಕುಟುಂಬಗಳಿಗೆ 25 ಲಕ್ಷ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ತೊಕ್ಕೊಟ್ಟುವಿನಲ್ಲಿ ವೆಲ್ಫೇರ್ ಪಾರ್ಟಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಐಓ ರಾಷ್ಟ್ರೀಯ ಅಧ್ಯಕ್ಷ ಲಬೀದ್ ಶಾಫಿ, ತಪ್ಪು ಮಾಡಿದ ಅಧಿಕಾರಿಗಳನ್ನು ಅಮಾನತಿನಲ್ಲಿಡಬೇಕಾಗಿದೆ. ಡಿ.19ರಂದು ಪೌರತ್ವ ಕಾಯಿದೆ ವಿರುದ್ಧ ಧ್ವನಿ ಎತ್ತಲು ಜನ ಸೇರಿದ್ದ ಸಂದರ್ಭ ಪೊಲೀಸರು ಕಾನೂನು ಕ್ರಮ ಕೈಗೊಂಡು ಗುಂಡಿನ ದಾಳಿ ಮಾಡಿದ್ದರಿಂದ ಎರಡು ಜೀವ ಹೋಗಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಒದಗಿಸಬೇಕು. ಮೃತ ಕುಟುಂಬದ ಪೈಕಿ ಒಬ್ಬನಿಗೆ ಸರಕಾರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಅಡ್ವಕೇಟ್ ಸರ್ಪರಾಝ್, ವೆಲ್ಫೇರ್ ಪಾರ್ಟಿ ಅಧ್ಯಕ್ಷ ಹನೀಫ್ ತಲಪಾಡಿ, ಕಾರ್ಯದರ್ಶಿ ಮುಹಮ್ಮದ್ ಸೈಫ್, ವೆಲ್ಫೇರ್ ಫೌಂಡೇಶನ್ ಸಂಚಾಲಕ ತಫ್ಲೀಲ್, ಫಝಲ್ ಉಪಸ್ಥಿತರಿದ್ದರು.

Next Story





