ಜ.4ರಂದು ಕಾಪುವಿನಲ್ಲಿ ಸಿಎಎ, ಎನ್‍ಆರ್ ಸಿ ವಿರುದ್ಧ ಪ್ರತಿಭಟನೆ
ಕಾಪು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ ಹಾಗೂ ಎನ್‍ಆರ್‍ಸಿ ಕಾಯ್ದೆ ವಿರುದ್ಧ ಕಾಪು ಜಾತ್ಯತೀತ ನಾಗರಿಕ ಸಮಿತಿ ನೇತೃತ್ವದಲ್ಲಿ ಜ.4ರಂದು ಬೆಳಿಗ್ಗೆ 10 ಗಂಟೆಗೆ ಕಾಪು ಪೇಟೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಲಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಕಾಪುವಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾತ್ಯಾತೀತತೆ ಮತ್ತು ಸಹೋದರತ್ವಕ್ಕೆ ತಿಲಾಂಜಲಿಯಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕವಾಗುವ ಜನವಿರೋಧಿ ಕಾನೂನುಗಳನ್ನು ಅಸಾಂವಿಧಾನಿಕವಾಗಿ ಮತ್ತು ಬಲವಂತವಾಗಿ ನಾಗರಿಕರ ಮೇಲೆ ಹೇರುವ ಹುನ್ನಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿದೆ. ಕಾನೂನು ಜಾರಿಗೆ ಮೊದಲು ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿತ್ತು. ಸರ್ವಪಕ್ಷ ಸಭೆ ಕರೆದು ಕಾನೂನು ಜರಿಯ ರೂಪುರೇಷೆ ಸಿದ್ದಪಡಿಸದೆ, ಕೇಂದ್ರ ಹಾಗೂ ರಾಜ್ಯದಲ್ಲಿ ಬಹುಮತವಿದೆ ಎನ್ನುವ ಕಾರಣಕ್ಕಾಗಿ ಏಕಾಏಕಿ ಕಾನೂನು ಹೇರಲು ಸರ್ಕಾರ ಮುಂದಾಗಿದೆ ಎಂದು ಆರೊಪಿಸಿದರು.
ಪ್ರತಿಭಟನೆಯಲ್ಲಿ ಚಿಂತಕ ಫಣಿರಾಜ್, ಹರ್ಷ ಕುಮಾರ್, ಧರ್ಮಗುರು ವಿಲಿಯಂ ಮಾರ್ಟಿಸ್ ಮತ್ತಿತರ ಪ್ರಮುಖರು ಪಾಲ್ಗೊಳ್ಳುವರು ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಮಾತನಾಡಿ, ಹಿಟ್ಲರ್ ರೀತಿಯಲ್ಲಿ ಕಾನೂನು ಜಾರಿ ದೇಶ ವಿರೋಧಿಸುತ್ತಿದೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಬಗ್ಗೆ ಒಕ್ಕೊರಲಿನಿಂದ ಶಾಂತಿಯುತ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಸುವರ್ಣ ಅಡ್ವೆ, ಕಾಪು ಜಾತ್ಯತೀತ ನಾಗರಿಕ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಹರೀಶ್ ನಾಯಕ್ ಕಾಪು ಉಪಸ್ಥಿತರಿದ್ದರು.







