ಸಂಕ್ರಾಂತಿ ನಂತರ ಸಚಿವ ಸಂಪುಟ ವಿಸ್ತರಣೆ, ಇಲ್ಲವೇ ಪುನರ್ ರಚನೆ: ಸಚಿವ ಈಶ್ವರಪ್ಪ

ಶಿವಮೊಗ್ಗ, ಜ. 2: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣಕರ್ತರಾದ, ಉಪ ಚುನಾವಣೆಯಲ್ಲಿ ಜಯ ಸಾಧಿಸಿದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವುದು ನಿಶ್ಚಿತ. ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾಗಲಿದೆ' ಎಂದು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಏಕಕಾಲದಲ್ಲಿ ಆಗಬಹುದು. ಅಥವಾ ಆಗದಿರಬಹುದು. ಈ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಹೆಚ್.ವಿಶ್ವನಾಥ್, ಆರ್.ಶಂಕರ್ ಕುರಿತಂತೆ ಪ್ರತಿಕ್ರಿಯಿಸಿದ ಅವರು, 'ಆರ್. ಶಂಕರ್ ರವರ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. 6 ತಿಂಗಳಲ್ಲಿ ಎಂಎಲ್‍ಎ ಅಥವಾ ಎಂಎಲ್‍ಸಿ ಆಗಬೇಕು. ಆನಂತರ ಸಚಿವ ಸ್ಥಾನದ ಹುದ್ದೆಗೇರಬಹುದು ಎಂದು ಹೇಳಿದೆ. ಅದರಂತೆ ನಡೆದುಕೊಳ್ಳಬೇಕಾಗುತ್ತದೆ. ಉಳಿದಂತೆ ವಿಶ್ವನಾಥ್‍ರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಕುರಿತಂತೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಉಪ ಮುಖ್ಯಮಂತ್ರಿ ಹುದ್ದೆ ಬೇಡ ಎಂದು ಶಾಸಕ ರೇಣುಕಾಚಾರ್ಯ ಶಾಸಕರ ಸಹಿ ಸಂಗ್ರಹಿಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕೆ.ಎಸ್.ಈಶ್ವರಪ್ಪ, 'ಈಗಾಗಲೇ ಸ್ವತಃ ರೇಣುಕಾಚಾರ್ಯರವರೇ ಸಹಿ ಸಂಗ್ರಹ ನಡೆಸುತ್ತಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಇದೆಲ್ಲ ಬೀದಿಯಲ್ಲಿ ನಿಂತು ಮಾತನಾಡುವುದಲ್ಲ. ಪಕ್ಷದೊಳಗಿನ ಆಂತರಿಕ ವಿಚಾರವಾಗಿದೆ. ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ' ಎಂದು ತಿಳಿಸಿದರು.
ಮಹಾರಾಷ್ಟ್ರ ಸರ್ಕಾರ ಅನಗತ್ಯವಾಗಿ ಕನ್ನಡಿಗರನ್ನು ಕೆಣಕುತ್ತಿದೆ. ಗಡಿ ವಿವಾದ ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿದೆ. ವಿನಾ ಕಾರಣ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಯವರು ವಿವಾದ ಉಂಟು ಮಾಡುತ್ತಿವೆ. ನೆಲ, ಜಲ ವಿಚಾರದಲ್ಲಿ ರಾಜ್ಯವು ಎಂದಿಗೂ ವಿವಾದ ಹುಟ್ಟು ಹಾಕಿಲ್ಲ. ಕಾನೂನು ಬದ್ದವಾಗಿ ನಡೆದುಕೊಳ್ಳುತ್ತಿದೆ ಎಂಬುವುದನ್ನು ಅರಿತುಕೊಳ್ಳಬೇಕು ಎಂದರು.
ನೆರೆ ಹಾನಿಗೆ ಸಂಬಂಧಿಸಿದಂತೆ ಈಗಾಗಲೇ 1500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲಿಯೇ ಎಲ್ಲರಿಗೂ ಪರಿಹಾರ ಲಭ್ಯವಾಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.







