ಗಣರಾಜ್ಯೋತ್ಸವಕ್ಕೆ ಮಹಾರಾಷ್ಟ್ರದ ಸ್ತಬ್ದಚಿತ್ರ ತಿರಸ್ಕರಿಸಿದ ಕೇಂದ್ರ: ಎನ್‌ಸಿಪಿ ಕಿಡಿ

ಮುಂಬೈ, ಜ.3: ಈ ವರ್ಷ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಮಹಾರಾಷ್ಟ್ರ ಸರಕಾರ ಸಿದ್ಧಪಡಿಸಿರುವ ಸ್ತಬ್ದಚಿತ್ರವನ್ನೂ ಕೂಡ ಕೇಂದ್ರ ಸರಕಾರ ತಿರಸ್ಕರಿಸಿದೆ. ಪಶ್ಚಿಮಬಂಗಾಳದ ಬಳಿಕ ಸ್ತಬ್ದಚಿತ್ರ ತಿರಸ್ಕರಿಸಲ್ಪಟ್ಟಿರುವ ಎರಡನೇ ಬಿಜೆಪಿಯೇತರ ರಾಜ್ಯ ಸರಕಾರ ಇದಾಗಿದೆ.
ಕೇಂದ್ರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಇದು ಪೂರ್ವಾಗ್ರಹ ಪೀಡಿತ ನಿರ್ಧಾರವಾಗಿದ್ದು, ಇದಕ್ಕೆ ವಿವರಣೆ ನೀಡಬೇಕೆಂದು ಆಗ್ರಹಿಸಿದೆ.
ಮರಾಠಿಯಲ್ಲಿ ಸರಣಿ ಟ್ವೀಟ್ ಮಾಡಿರುವ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಪುತ್ರಿ, ಪಕ್ಷದ ನಾಯಕಿ ಸುಪ್ರಿಯಾ ಸುಳೆ,‘‘ಗಣರಾಜ್ಯೋತ್ಸವ ಎನ್ನುವುದು ದೇಶದ ಹಬ್ಬ. ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಈ ಹಬ್ಬದಲ್ಲಿ ಪ್ರತಿನಿಧಿಯಾಗಲು ಅವಕಾಶ ನೀಡುವ ನಿರೀಕ್ಷೆ ಇತ್ತು. ಆದರೆ, ಕೇಂದ್ರ ಸರಕಾರ ಪೂರ್ವಾಗ್ರಹ ಪೀಡಿತವಾಗಿ ವರ್ತಿಸಿದೆ. ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮೇಲೆ ಮಲತಾಯಿ ಧೋರಣೆ ಪ್ರದರ್ಶಿಸಿದೆ’’ ಎಂದು ಬರೆದಿದ್ದಾರೆ.
‘‘ಎರಡು ರಾಜ್ಯಗಳ ಸ್ತಬ್ದ ಚಿತ್ರಗಳನ್ನು ಏಕೆ ತಿರಸ್ಕರಿಸಲಾಗಿದೆ ಎಂದು ವಿವರಣೆ ನಮಗೆ ನೀಡಬೇಕು.ಮಹಾರಾಷ್ಟ್ರ ಮುಖ್ಯಮಂತ್ರಿ ಈ ವಿಚಾರವನ್ನು ತನಿಖೆ ನಡೆಸಬೇಕು. ಇದರಿಂದ ಯಾರು ಇದಕ್ಕೆ ಜವಾಬ್ದಾರಿ ಎಂದು ಗೊತ್ತಾಗುತ್ತದೆ’’ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಮರಾಠಿ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದರು.
‘‘ಗಣರಾಜ್ಯೋತ್ಸವ ಪರೇಡ್‌ಗೆ ಪಶ್ಚಿಮಬಂಗಾಳದ ಸ್ತಬ್ದಚಿತ್ರವನ್ನು ತಿರಸ್ಕರಿಸಿರುವುದು ತಾರತಮ್ಯವಾಗಿದೆ. ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಯೋಜನೆಯನ್ನು ಪಶ್ಚಿಮಬಂಗಾಳ ತೀವ್ರವಾಗಿ ವಿರೋಧಿಸುತ್ತಿರುವ ಕಾರಣ ಹೀಗೆ ಮಾಡಲಾಗಿದೆ’’ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ತಿಳಿಸಿದ್ದರು.







