ಜ.8ರಂದು ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಮುಷ್ಕರ
ಜೆಸಿಟಿಯು ಜಿಲ್ಲಾ ಸಮಿತಿಯಿಂದ ಪ್ರತಿಭಟನಾ ಪ್ರದರ್ಶನ

ಮಂಗಳೂರು, ಜ.3: ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಮಧ್ಯಮ ವರ್ಗದ ಕಾರ್ಮಿಕ ಸಂಘಟನೆಗಳು ಜ.8ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ (ಜೆಸಿಟಿಯು) ವತಿಯಿಂದ ಪ್ರತಿಭಟನಾ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಎಐಟಿಯುಸಿಯ ಮುಖಂಡ ಎಚ್.ವಿ. ರಾವ್, ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವ ನೀತಿಗಳನ್ನು ಬದಲಾಯಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು ಸೇರಿದಂತೆ 12 ಅಂಶಗಳ ಬೇಡಿಕೆಯನ್ನು ಇರಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದರು.
ಮುಷ್ಕರದ ಅಂಗವಾಗಿ ಅಂದು ನಗರದ ಪುರಭವನದ ಎದುರು ಪ್ರತಿಭಟನಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ಮಾತ್ರವಲ್ಲದೆ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದು ಸಿಐಟಿಯುನ ವಸಂತ ಆಚಾರಿ ತಿಳಿಸಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಆಡಳಿತ ವಹಿಸಿದಾಗಿನಿಂದ ಲಕ್ಷಾಂತರ ಉದ್ಯೋಗಗಳು ನಾಶವಾಗಿವೆ. ಉದಾರೀಕರಣ ಹಾಗೂ ಖಾಸಗೀಕರಣದಿಂದಾಗಿ ಗುತ್ತಿಗೆ ಹಾಗೂ ದಿನಕೂಲಿ ಕಾರ್ಮಿಕರ ಪರಿಸ್ಥಿತಿ ಹದಗೆಟ್ಟಿದೆ. ಕಾರ್ಮಿಕರು ಹೋರಾಟದ ಮೂಲಕ ಪಡೆದುಕೊಂಡ ಸುಮಾರು 44 ಕಾನೂನುಗಳನ್ನು ಸಂಹಿತೆಯಾಗಿ ಮಾಡುವ ಮೂಲಕ ಕಾರ್ಮಿಕ ವಿರೋಧಿಯಾಗಿ ಕಾರ್ಪೊರೇಟ್ ಕಂಪನಿಗಳ ಪರ ಹುನ್ನಾರ ನಡೆಯುತ್ತಿದೆ. ಇದನ್ನೆಲ್ಲಾ ವಿರೋಧಿಸಿ ಈ ಮುಷ್ಕರ ನಡೆಯುತ್ತಿದೆ ಎಂದು ಸಿಐಟಿಯುನ ಸುನಿಲ್ ಕುಮಾರ್ ಬಜಾಲ್ ವಿವರಿಸಿದರು.
ಕಾರ್ಮಿಕರ ಕನಿಷ್ಠ ವೇತನ 21,000 ರೂ.ಗಳಿಗೆ ಹೆಚ್ಚಿಸಬೇಕು. ಗುತ್ತಿಗೆ ಹಾಗೂ ದಿನಕೂಲಿ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಹೊರಗುತ್ತಿಗೆ ನಿಲ್ಲಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಭಾರತೀಯ ವಿಮಾ ಸಂಸ್ಥೆಗಳನ್ನು ವಿಲೀನಗೊಳಿಸಬಾರದು. ಅಸಂಘಟಿತ ವಲಯದ ಕಾರ್ಮಿಕರಿಗೆ ಶಾಸನಬದ್ಧ ಭವಿಷ್ಯನಿಧಿ ಹಾಗೂ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು. ನಿವೃತ್ತ ಕಾರ್ಮಿಕರಿಗೆ ಕನಿಷ್ಠ 10,000 ರೂ. ಪಿಂಚಣಿ ನೀಡಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು. ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು ಸೇರಿದಂತೆ ಇತರ ಹಲವು ಬೇಡಿಕೆಗಳು ಕೂಡಾ ಸೇರಿವೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಇಂಟಕ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, ಎಐಟಿಯುಸಿಯ ಸೀತಾರಾಮ್ ಬೇರಿಂಜ, ಕರುಣಾಕರ್ ಉಚ್ಚಿಲ್, ಸಿಐಟಿಯುನ ಬಾಲಕೃಷ್ಣ ಶೆಟ್ಟಿ, ಇಂಟಕ್‌ನ ಉಮೇಶ್ ಕೋಟ್ಯಾನ್, ಉಮೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.







