ಮುಡಿಪು: ವಿದ್ಯಾರ್ಥಿಗಳೇ ಬೆಳೆದ ಭತ್ತದ ಪೈರಿನ ಕಟಾವು

ಕೊಣಾಜೆ: ಬಂಟ್ವಾಳ ತಾಲೂಕು ಮುಡಿಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಪಾತೂರು ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಪೈರನ್ನು ವಿದ್ಯಾಥಿಗಳೇ ಒಟ್ಟು ಸೇರಿ ಕಟಾವು ಮಾಡಿದರು.
ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಶಾಂತ ಕಾಜವರವರು ಪೈರನ್ನು ಕಟಾವು ಮಾಡುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವ ಸಮುದಾಯ ಇಂದು ಕೃಷಿಯಿಂದ ದೂರವಾಗುತ್ತಿದ್ದಾರೆ. ಆದರೆ ಕೃಷಿ ಇಲ್ಲದೆ ನಮ್ಮ ಬದುಕು ಸಾಧ್ಯವಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಯುವ ಸಮುದಾಯ ಕೃಷಿಯತ್ತ ಆಕರ್ಷಿತರಾಗಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮುಡಿಪು ಕಾಲೇಜಿನ ವಿದ್ಯಾರ್ಥಿಗಳು ಮಾದರಿ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಪ್ರಾಂಶುಪಾಲರಾದ ಗಿರಿಧರ್ ರಾವ್ ಎಂ.ಎಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಬೆಳೆದ ಅಕ್ಕಿಯನ್ನು ವಾರ್ಷಿಕ ವಿಶೇಷ ಶಿಬಿರಕ್ಕೆ ಬಳಸಲು ಹಾಗೂ ಆಶ್ರಮಕ್ಕೆ ನೀಡಲು ನಿರ್ಧರಿಸಲಾಗಿದೆ. ಯೋಜನಾಧಿಕಾರಿಗಳಾದ ಶೋಭಾಮಣಿ, ಉಪನ್ಯಾಸಕರಾದ ಪ್ರದೀಪ್ ಬಂಗೇರ, ಹರಿಣಾಕ್ಷಿ ಮತ್ತು ಕಾಲೇಜು ವಿದ್ಯಾರ್ಥಿಗಳು ಸ್ವಯಂ ಸೇವಕರ ಜೊತೆ ಕೈ ಜೋಡಿಸಿದರು.





