ಮುಂದಿನ ಕ್ರಮವಾಗಿ ರೊಹಿಂಗ್ಯನ್ನರ ಗಡೀಪಾರು: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಜಮ್ಮು: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪ್ರಸ್ತಾವಿತ ಎನ್‍ಆರ್ ಸಿ ವಿರುದ್ಧ ಪ್ರತಿಭಟನೆಗಳು ಮುಂದುವರಿದಿರುವಂತೆಯೇ ಭಾರತದಲ್ಲಿ ನೆಲೆಸಿರುವ ರೊಹಿಂಗ್ಯನ್ನರನ್ನು ಗಡೀಪಾರುಗೊಳಿಸುವುದು ಕೇಂದ್ರ ಸರಕಾರ ಮುಂದಿನ ಕ್ರಮವಾಗಲಿದೆ ಎಂದು ಪ್ರಧಾನಿ ಕಾರ್ಯಾಲಯದ ಕೇಂದ್ರ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಹೇ ಹೇಳಿದ್ದಾರೆ.
ಶುಕ್ರವಾರ ಜಮ್ಮುವಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಸರಕಾರ ರೋಹಿಂಗ್ಯನ್ನರನ್ನು ಗಡೀಪಾರುಗೊಳಿಸುವ ವಿಧಾನಗಳನ್ನು ಪರಿಶೀಲಿಸುತ್ತಿದೆ'' ಎಂದು ಹೇಳಿದ್ದಾರೆ.
"ಪೌರತ್ವ ತಿದ್ದುಪಡಿ ಕಾಯಿದೆಯು ಜಮ್ಮು ಕಾಶ್ಮೀರ ಕೇಂದ್ರಾಡಳಿತಕ್ಕೂ ಅನ್ವಯವಾಗುತ್ತದೆ'' ಎಂದು ಹೇಳಿದ ಅವರು, ಜಮ್ಮುವಿನಲ್ಲಿ ಸಾಕಷ್ಟು ಸಂಖ್ಯೆಯ ರೋಹಿಂಗ್ಯನ್ನರು ನೆಲೆಸಿದ್ದಾರೆ. ಅವರ ಪಟ್ಟಿ ತಯಾರಿಸಿ ಅವರ ಬಯೋಮೆಟ್ರಿಕ್ ವಿವರಗಳನ್ನೂ ಸಂಗ್ರಹಿಸಲಾಗುವುದು ಎಂದಿದ್ದಾರೆ.
"ಮೂರು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನಗಳಲ್ಲಿನ ಆರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಪೈಕಿ (ಹಿಂದು, ಸಿಖ್, ಬೌದ್ಧ, ಜೈನ್, ಪಾರ್ಸಿ, ಕ್ರೈಸ್ತ) ರೋಹಿಂಗ್ಯನ್ನರಿಲ್ಲ, ಅವರು ಮ್ಯಾನ್ಮಾರ್ ನವರಾಗಿರುವುದರಿಂದ ಅವರು ಭಾರತೀಯ ಪೌರತ್ವಕ್ಕೆ ಅರ್ಹರಲ್ಲ. ಆದುದರಿಂದ ದೇಶ ಬಿಟ್ಟು ಹೋಗಬೇಕಾಗಿದೆ''ಎಂದು ಸಿಂಗ್ ಹೇಳಿದರು.
ಗೃಹಸಚಿವಾಲಯದ ಪ್ರಕಾರ ದೇಶದಲ್ಲಿ ವಿಶ್ವ ಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಕಚೇರಿಯಲ್ಲಿ ನೋಂದಣಿಗೊಂಡಿರುವ ಅಂದಾಜು 14,000 ರೋಹಿಂಗ್ಯ ನಿರಾಶ್ರಿತರಿದ್ದರೆ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯನ್ನರ ಸಂಖ್ಯೆ 40,000ದಷ್ಟಿರಬಹುದು ಎಂದು ಅಂದಾಜಿಸಲಾಗಿದೆ.







