'ನೀವು ಭಾರತದ ಪ್ರಧಾನಿಯೇ?, ಪಾಕಿಸ್ತಾನದ ರಾಯಭಾರಿಯೇ?': ಮೋದಿಗೆ ಮಮತಾ ಪ್ರಶ್ನೆ

ಕೊಲ್ಕತ್ತಾ: "ನೀವು ಭಾರತದ ಪ್ರಧಾನ ಮಂತ್ರಿಯೇ ಅಥವಾ ಪಾಕಿಸ್ತಾನದ ರಾಯಭಾರಿಯೇ ?, ಪ್ರತಿಯೊಂದು ವಿಚಾರದಲ್ಲೂ ಪಾಕಿಸ್ತಾನವನ್ನೇಕೆ ವೈಭವೀಕರಿಸುತ್ತೀರಿ?'' ಹೀಗೆಂದು ಪ್ರಶ್ನಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಿಲಿಗುರಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ "ಭಾರತವು ಭವ್ಯ ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ ದೊಡ್ಡ ದೇಶ. ನಮ್ಮ ದೇಶವನ್ನು ಪಾಕಿಸ್ತಾನದೊಂದಿಗೆ ಆಗಾಗ ಏಕೆ ಹೋಲಿಕೆ ಮಾಡುತ್ತೀರಿ? ನೀವು ಹಿಂದುಸ್ತಾನದ ಬಗ್ಗೆ ಮಾತನಾಡಬೇಕು''ಎಂದು ಹೇಳಿದರು.
"ಯಾರಾದರೂ ನೌಕರಿ ಕೊಡಿ ಎಂದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಪ್ರಧಾನಿ ಹೇಳುತ್ತಾರೆ. ನಮ್ಮಲ್ಲಿ ಕೈಗಾರಿಕೆಗಳಿಲ್ಲ ಎಂದು ಯಾರಾದರೂ ಹೇಳಿದರೂ ಅವರು ಪಾಕಿಸ್ತಾನಕ್ಕೆ ಹೋಗಲಿ ಎನ್ನುತ್ತಾರೆ. ಪಾಕಿಸ್ತಾನ್ ಕಾ ಚರ್ಚಾ ಪಾಕಿಸ್ತಾನ್ ಕರೇ, ಹಮ್ ಹಿಂದುಸ್ತಾನ್ ಕಾ ಚರ್ಚಾ ಕರೇಂಗೆ, ಯೇ ಹಮಾರಿ ಜನ್ಮಭೂಮಿ ( ಪಾಕಿಸ್ತಾನವು ಪಾಕಿಸ್ತಾನದ ಬಗ್ಗೆ ಚರ್ಚಿಸಲಿ, ನಾವು ಭಾರತದಲ್ಲಿ ಭಾರತದ ಕುರಿತು ಚರ್ಚಿಸೋಣ. ಇದು ನಮ್ಮ ಜನ್ಮಭೂಮಿ)'' ಎಂದು ಮಮತಾ ಹೇಳಿದರು.
"ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ನಾವು ನಮ್ಮ ಪೌರತ್ವ ಸಾಬೀತು ಪಡಿಸಬೇಕಾಗಿರುವುದು ನಾಚಿಕೆಗೇಡು'' ಎಂದು ಅವರು ಕೇಂದ್ರವನ್ನು ಟೀಕಿಸಿದರು.
"ನಾನು ಎನ್‍ಆರ್ ಸಿ ಹಾಗೂ ಸಿಎಎ ವಿರುದ್ಧ ಹೋರಾಡುತ್ತಿದ್ದೇನೆ. ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು'' ಎಂದು ಅವರು ಹೇಳಿದರು.







