ಮಂಗಳಮುಖಿಯರಿಗೆ ವಾಣಿಜ್ಯ ಆಧಾರಿತ ಕೋರ್ಸ್ ನೀಡುವಂತಾಗಲಿ: ಡಿಸಿಪಿ ಅರುಣಾಂಶುಗಿರಿ

ಮಂಗಳೂರು, ಜ.3: ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದ್ದು, ಶಿಕ್ಷಣ ಸಂಸ್ಥೆಗಳು ರಾತ್ರಿ ಸಮಯದಲ್ಲಿ ಮಂಗಳಮುಖಿರಿಗೆ ವಾಣಿಜ್ಯ ಆಧಾರಿತ ಕೋರ್ಸ್‌ಗಳನ್ನು ನೀಡುವ ಮೂಲಕ ಉದ್ಯೋಗ ರಂಗದಲ್ಲಿ ಅವಕಾಶ ನೀಡಬೇಕು ಎಂದು ಡಿಸಿಪಿ ಡಾ.ಅರುಣಾಂಶುಗಿರಿ ಹೇಳಿದರು.
ಅವರು ಶುಕ್ರವಾರ ನಗರದ ಕೆನರಾ ಹೈಸ್ಕೂಲ್‌ನ ಶ್ರೀಸುಧೀಂದ್ರ ಸಭಾಂಗಣದಲ್ಲಿ ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಕೆನರಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಕೋಶ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ‘ತೃತೀಯ ಲಿಂಗಿಗಳ ಬದುಕು ಬವಣೆ’ ವಿವಿ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಮ್ಯಾ ಗೌಡ ದಿಕ್ಸೂಚಿ ಭಾಷಣ ಮಾಡಿ, ಮಂಗಳಮುಖಿಯರನ್ನು ಪೋಷಕರು ಮಾತ್ರವಲ್ಲ ಸಮಾಜ ಕೂಡಾ ದೂರ ಮಾಡುತ್ತದೆ. ಈ ಸಮಯದಲ್ಲಿ ಭಿಕ್ಷಾಟನೆಯಲ್ಲದೆ ಅನ್ಯ ಮಾರ್ಗವಿಲ್ಲ. ನಮಗೆ ರಾಜಕೀಯ, ಶೈಕ್ಷಣಿಕ ರಂಗದಲ್ಲಿ ಮೀಸಲಾತಿ ಸಿಗಲಿ. ಉದ್ಯೋಗ ಮಾಡಲು ಅರ್ಹರಲ್ಲ ಎನ್ನುವ ಬದಲು ಉದ್ಯೋಗ ನೀಡುವ ಕೆಲಸ ಆಗಲಿ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಮಂಗಳಮುಖಿಯರನ್ನು ಸಮಾಜ ನೋಡುವ ದೃಷ್ಟಿಕೋನ ಮೊದಲು ಬದಲಾಗಬೇಕಿದೆ. ನಮ್ಮ ರೀತಿಯಲ್ಲಿ ಹುಟ್ಟಿ ನಮ್ಮಿಂದ ದೂರವಾಗುವ ಅವರನ್ನು ನಮ್ಮವರೆಂದೇ ಪರಿಗಣಿಸುವ ಕಾರ್ಯ ಮೊದಲು ನಡೆಯಬೇಕು ಎಂದರು.
ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಂಸ್ಥಾಪಕಿ ವೈಲೆಟ್ ಪಿರೇರಾ ಸಂಸ್ಥೆಯ ಕುರಿತು ಮಾತನಾಡಿದರು. ಈ ಸಂದರ್ಭ ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ವಾಮನ್ ಕಾಮತ್, ಆಡಳಿತ ಮಂಡಳಿಯ ಸದಸ್ಯ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಕಾಲೇಜಿನ ಪ್ರಿನ್ಸಿಪಾಲ್ ಕೆ.ವಿ.ಮಾಲಿನಿ ಮಲ್ಯ, ಕಾಲೇಜಿನ ಡಾ.ಪ್ರೇಮಾಲತಾ, ವಾಣಿ, ತಾರಾ ಕುಮಾರಿ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ವಿಜಯಲಕ್ಷ್ಮಿ ಭಟ್ ಯು ಮೊದಲಾದವರು ಉಪಸ್ಥಿತರಿದ್ದರು.
ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಕಾರ್ಯದರ್ಶಿ ಸುಖಲಾಕ್ಷಿ ವೈ ಸುವರ್ಣ ವಂದಿಸಿದರು.









