ಮಂಗಳೂರಿನಲ್ಲಿ ಪ್ರತಿಭಟಿಸುತ್ತಿದ್ದ ಎಲ್ಲರನ್ನೂ ಶೂಟ್ ಮಾಡಬೇಕಿತ್ತು: ಸೋಮಶೇಖರ ರೆಡ್ಡಿ ವಿವಾದಾತ್ಮಕ ಹೇಳಿಕೆ

ಬಳ್ಳಾರಿ, ಜ.3: ನಮ್ಮ ದೇಶದಲ್ಲಿ ಇರಬೇಕಾದರೆ ನಾವು ಹೇಳಿದಂತೆ ಕೇಳಿ, ಇಲ್ಲದಿದ್ದರೆ ನಾವು ಏನು ಮಾಡಬೇಕೇಂದು ತೀರ್ಮಾನಿಸುತ್ತೇವೆ. ನಮ್ಮ ಪಕ್ಷದಲ್ಲಿರುವ ಮುಸ್ಲಿಮರು ಆತಂಕದಲ್ಲಿದ್ದಾರೆ. ಅದಕ್ಕಾಗಿಯಾದರೂ ಅವರು ಓಡಿಹೋಗಲಿ, ನಾವೆಲ್ಲ ಆರಾಮಾಗಿ ಪ್ರಶಾಂತವಾಗಿ ಇರುತ್ತೇವೆ ಎಂದು ಬಳ್ಳಾರಿ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಿಎಎ-ಎನ್‌ಆರ್‌ಸಿ ಪರವಾಗಿ ಶುಕ್ರವಾರ ಬಳ್ಳಾರಿಯಲ್ಲಿ ದೇಶಭಕ್ತ ನಾಗರಿಕರ ವೇದಿಕೆ ಆಯೋಜಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಬೇಕೂಫ್‌ಗಳು ಹೇಳುವ ಸುಳ್ಳು ನಂಬಿಕೊಂಡು ಯಾಕೆ ಬೀದಿಗೆ ಬರುತ್ತಿರಾ? ನಾವು ಇಲ್ಲಿ ಶೇ.80ರಷ್ಟು ಇದ್ದೇವೆ. ನೀವು ಇರುವುದು ಶೇ.17ರಷ್ಟು ಮಾತ್ರ. ನಾವು ತಿರುಗಿ ಬಿದ್ದರೆ, ನಿಮ್ಮ ಪರಿಸ್ಥಿತಿ ಏನಾಗುತ್ತದೆ ಎಂಬುದರ ಬಗ್ಗೆ ಎಚ್ಚರವಿರಲಿ ಎಂದರು.
ನಮ್ಮ ದೇಶದ, ನಮ್ಮ ಸರಕಾರದ ವಾಹನಗಳು ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿದಂತೆ ನಾವು ನಿಮ್ಮ ಮೇಲೆ ದಾಳಿ ಮಾಡಿದರೆ ಹೇಗಿರುತ್ತೆ. ನಮಗೆ ರೋಷ ಬಂದು, ನಿಮ್ಮ ಆಸ್ತಿಗಳನ್ನು ಸುಟ್ಟರೆ ನೀಮಗೆ ಹೇಗಾಗುತ್ತದೆ. ಇದನ್ನು ಎಚ್ಚರಿಕೆಯ ಗಂಟೆಯಾಗಿ ನೀವು ತೆಗೆದುಕೊಳ್ಳಬೇಕು ಎಂದು ಸೋಮಶೇಖರ್ ರೆಡ್ಡಿ ತಾಕೀತು ಮಾಡಿದರು. ಪೌರತ್ವ ಕಾಯ್ದೆ ಬಂದರೆ, ನಿಮ್ಮನ್ನೆಲ್ಲ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಕ್ಕೆ ಓಡಿಸುತ್ತಾರೆ ಎಂದು ಕಾಂಗ್ರೆಸ್ ಪುಢಾರಿಗಳು, ನಿಮ್ಮ ಕಿವಿಯಲ್ಲಿ ಊದುತ್ತಿದ್ದಾರೆ. ನಿಮಗೆ ಆಸೆ ಇದ್ದರೆ ಹೋಗಿ, ನಾವು ಬೇಡ ಎನ್ನಲ್ಲ. ನಮಗೆ ನೀವು ಈಗಲೂ ಅಣ್ಣ ತಮ್ಮಂದಿರೇ. ಅದೇ ರೀತಿ ಇರಬೇಕು. ಶತ್ರುಗಳ ರೀತಿ ನೀವು ತಯಾರಾದರೆ, ನಾವು ಕೂಡ ಶತ್ರುಗಳ ರೀತಿ ತಯಾರಾಗಬೇಕಾಗುತ್ತದೆ ಎಂದು ಅವರು ಹೇಳಿದರು.
ಒಬ್ಬೊಬ್ಬ ಹಿಂದೂ ಒಬ್ಬೊಬ್ಬ ಶಿವಾಜಿಯಾಗಿ, ಬಳ್ಳಾರಿ ದುರ್ಗಮ್ಮನ ದರ್ಶನ ಪಡೆದುಕೊಂಡು ಖಡ್ಗ ಹಿಡಿದುಕೊಂಡರೆ ಏನಾಗಬಹುದು ನೋಡಿ. ಸಿಎಎ- ಎನ್‌ಆರ್‌ಸಿ ನಮ್ಮ ಕಾಯ್ದೆಗಳು, ಮೋದಿ-ಅಮಿತ್ ಶಾ ಮಾಡಿರುವ ಕಾಯ್ದೆಗಳು. ಅದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಚೆನ್ನಾಗಿರಲ್ಲ ಎಂದು ಸೋಮಶೇಖರ್ ರೆಡ್ಡಿ ಎಚ್ಚರಿಕೆ ನೀಡಿದರು. ಪಂಕ್ಚರ್ ಹಾಕುವವರು ಪೌರತ್ವ ಕಾಯ್ದೆಗೆ ವಿರೋಧ ಮಾಡುತ್ತಿದ್ದಾರೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ನೀಡಿದ ಹೇಳಿಕೆ ಸರಿಯಾಗಿದೆ. ಪಂಕ್ಚರ್ ಹಾಕುವವರು, ಮೆಕಾನಿಕ್‌ಗಳು ಓದಿಕೊಂಡಿಲ್ಲ, ಓದುಕೊಂಡಿರುವವರು ನಿಮಗೆ ಸುಳ್ಳು ಹೇಳುತ್ತಿದ್ದಾರೆ. ಅದನ್ನು ನಂಬಿ ನೀವು ಬೀದಿಗೆ ಬರುತ್ತಿದ್ದೀರಾ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿಎಎ ಅಂದರೆ ನಿಮ್ಮ ಆಸ್ತಿಯನ್ನು ಕಿತ್ತುಕೊಳ್ಳುವುದಿಲ್ಲ, ನಿಮ್ಮ ಅಪ್ಪನ ಆಸ್ತಿಯನ್ನು ಕಿತ್ತುಕೊಳ್ಳುವುದಿಲ್ಲ. ಪಾಕಿಸ್ತಾನದಲ್ಲಿ ಆ ರಾಕ್ಷಸರು ನಡೆಸುವ ದೌರ್ಜನ್ಯದಿಂದ ಬೇಸತ್ತು ನಮ್ಮ ದೇಶಕ್ಕೆ ಬರುವವರಿಗೆ ಪೌರತ್ವ ನೀಡಲು ಸಂಸತ್ತಿನಲ್ಲಿ ಕಾಯ್ದೆ ಅನುಮೋದನೆ ಪಡೆದಿದೆ. ಅಮೆರಿಕಾದಲ್ಲಿ ಸಿಎಎ ಪರವಾಗಿ ಅಲ್ಲಿನ ಜನ ಮೆರವಣಿಗೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಯೋಗಿ ಆದಿತ್ಯನಾಥ್ ಸರಕಾರ ಪ್ರತಿಭಟನೆಗಳಲ್ಲಿ ಪಾಲ್ಗೊಂಡವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ನಮ್ಮ ರಾಜ್ಯದಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಅದೇ ರೀತಿ ಮಾಡಬೇಕು. ಮಂಗಳೂರಿನಲ್ಲಿ ಅಮಾಯಕ ಪೊಲೀಸರ ಮೇಲೆ ದಾಳಿ ಮಾಡಿದವರನ್ನು ಶೂಟ್ ಮಾಡಲಾಗಿದೆ. ಪ್ರತಿಭಟನೆ ಮಾಡಿದ ಎಲ್ಲರನ್ನೂ ಶೂಟ್ ಮಾಡಬೇಕಿತ್ತು. ಹಾಗೆ ಶೂಟ್ ಮಾಡಿ ಬಿಸಾಕಿದ್ದರೆ ಜನಸಂಖ್ಯೆಯಾದರೂ ಕಡಿಮೆಯಾಗುತ್ತಿತ್ತು ಎಂದು ಅವರು ತಿಳಿಸಿದರು.
ನಮ್ಮ ದೇಶದಲ್ಲಿ ನಮಗೆ ಕುಟುಂಬ ಯೋಜನೆ, ನಿಮಗೆ ಕುಟುಂಬ ಯೋಜನೆ ಇಲ್ಲ. ನೀವು 10 ಮಂದಿ 20 ಮಂದಿ ಹಡಿಯುತ್ತಿದ್ದರೆ, ನಾವು ಸುಮ್ಮನೆ ಕೂತು ನೋಡುತ್ತಿರಬೇಕಾ? ನಾವು ಹಿಂದೂಗಳು 50 ಮಂದಿಯನ್ನು ಹಡಿಯುತ್ತೇವೆ. ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ಹಿಂದೂಗಳು ಶೇ.27ರಷ್ಟು ಇದ್ದರು, ಈಗ ಶೇ.1ಕ್ಕೆ ಇಳಿದಿದ್ದಾರೆ. ನಮ್ಮ ದೇಶದಲ್ಲೂ ನಿಮ್ಮ ಪ್ರಮಾಣವನ್ನು ಶೇ.1ಕ್ಕೆ ಇಳಿಸಲು ನಾವು ಸಿದ್ಧವಾಗಿದ್ದೇವೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.







