ಸ್ಪೀಕರ್ ಕಾಗೇರಿ ದ್ವೇಷ ಸಾಧಿಸುತ್ತಿದ್ದಾರೆ: ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್
ಬೆಂಗಳೂರು, ಜ.3: ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವೈಯಕ್ತಿಕ ದ್ವೇಷದಿಂದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಸರಕಾರಿ ಸೌಲಭ್ಯಗಳನ್ನು ನೀಡುತ್ತಿಲ್ಲವೆಂದು ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮದ ಪ್ರಕಾರ ವಿರೋಧ ಪಕ್ಷದ ನಾಯಕರಿಗೆ ಭದ್ರತಾ ಸಿಬ್ಬಂದಿ, ವಾಹನ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಬೇಕು. ಸರಕಾರ ರಚನೆಯಾಗಿ ಹಲವು ತಿಂಗಳು ಕಳೆದರು ಇನ್ನು ಸೌಲಭ್ಯ ನೀಡದೆ ವಂಚಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಹಲವು ಬಾರಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ ಮಾಡಲಾಗಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆ ಮೂಲಕ ಸ್ಪೀಕರ್ ಸ್ಥಾನಕ್ಕೆ ಚ್ಯುತಿ ಬರುವ ರೀತಿ ವರ್ತಿಸುತ್ತಿದ್ದಾರೆ. ಇದು ವಿಧಾನಸಭೆ ನಿಯಮಗಳ ಉಲ್ಲಂಘನೆಯೆಂದು ಅವರು ಆರೋಪಿಸಿದರು.
ಕೆಲಸ ಮಾಡಿ ಪ್ರತಿಕ್ರಿಯೆ ಕೊಡಲಿ: ಉತ್ತರ ಕರ್ನಾಟಕದ ನೆರೆ ಹಾವಳಿ ಪರಿಹಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ಕೊಡುತ್ತಾರೆಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳನ್ನು ಕೇಳಿ, ಓದಿ ಸಾಕಾಗಿದೆ. ಮೊದಲು ಕಾರ್ಯಗತಗೊಳಿಸಿದ ನಂತರ ಹೇಳಿಕೆಗಳನ್ನು ನೀಡಿದರೆ ಒಳ್ಳೆಯದು ಎಂದು ಅವರು ತಿರುಗೇಟು ನೀಡಿದರು.







