ಪೌರತ್ವ ಕಾಯ್ದೆಗೆ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ವಿರೋಧ

ಫೋಟೊ ಕೃಪೆ: twitter.com/ShivshankaMenon
ಹೊಸದಿಲ್ಲಿ, ಜ. 3: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಜಮ್ಮು ಕಾಶ್ಮೀರದಲ್ಲಿ ವಿಧಿ 370 ರದ್ದುಗೊಳಿಸಿರುವುದನ್ನು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಶುಕ್ರವಾರ ಕಟುವಾಗಿ ಟೀಕಿಸಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೆನನ್, ಸಾಂಪ್ರದಾಯಿಕ ಜೊತೆಗಾರನ ನಡುವೆಯೂ ಇಂದು ಭಾರತ ಏಕಾಂಗಿಯಾಗಿದೆ. ಇದರಿಂದ ಅಂತಿಮವಾಗಿ ಯಾವುದೇ ಒಳಿತು ಸಂಭವಿಸದು ಎಂದರು. ಭಾರತದ ಈ ಸರಣಿ ನಡೆಗೆ ಅನಿವಾಸಿ ಭಾರತೀಯ ಸಮುದಾಯದ ಕೆಲವರು ಹಾಗೂ ತೀವ್ರಗಾಮಿ ಬಲಪಂಥಕ್ಕೆ ಸೇರಿದ ಐರೋಪ್ಯ ಒಕ್ಕೂಟದ ಸಂಸದರ ಕೆಲಸಕ್ಕೆ ಬಾರದ ಗುಂಪಿನ ಬೆಂಬಲ ಸಿಗಬಹುದೇ ಹೊರತು ಯಾವುದೇ ಅಂತಾರಾಷ್ಟ್ರೀಯ ಬೆಂಬಲ ಸಿಗದು ಎಂದು ಮೆನನ್ ಹೇಳಿದರು.
ಭಾರತದ ಈ ನಡೆಯ ವಿರುದ್ಧ ವಿದೇಶದಲ್ಲಿ ಧ್ವನಿ ಎತ್ತಿದವರ ಪಟ್ಟಿ ದೀರ್ಘವಾಗಿದೆ. ಮ್ಯಾಕ್ರೋನ್ ಅಧ್ಯಕ್ಷರು, ವಲಸಿಗರಿಗೆ ಇರುವ ವಿಶ್ವಸಂಸ್ಥೆಯ ಹೈಕಮಿಷನ್ ಚಾನ್ಸೆಲರ್ ಮರ್ಕೆಲ್ ಹಾಗೂ ನಾರ್ವೆಯ ರಾಜ ಕೂಡಾ ಇದರಲ್ಲಿ ಸೇರಿದ್ದಾರೆ ಎಂದು ಅವರು ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ವಿಧಿ 370 ರದ್ದು ಕುರಿತು ಅಮೆರಿಕ ಕಾಂಗ್ರೆಸ್ ನಾಯಕಿ ಪ್ರಮೀಳಾ ಜಯಪಾಲ್ ಉಪಸ್ಥಿತರಿದ್ದ ಕಾರಣ ಅಮೆರಿಕದಲ್ಲಿ ವಿದೇಶಾಂಗ ವ್ಯವಹಾರಗಳ ಸಮಿತಿಯೊಂದಿಗಿನ ಮಾತುಕತೆಯಿಂದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಪ್ಪಿಸಿಕೊಂಡಿರುವ ಇತ್ತೀಚೆಗಿನ ಉದಾರಣೆಯನ್ನು ಉಲ್ಲೇಖಿಸಿದ ಮೆನನ್, ನಾವು ಏಕಾಂಗಿಯಾಗಿದ್ದೇವೆ ಎಂಬ ಭಾವನೆ ಉಂಟಾಗಿದೆ. ಸಭೆಯಲ್ಲಿ ಪಾಲ್ಗೊಳ್ಳುವ ಹಾಗೂ ಅವರ ಆರೋಪ ಖಂಡಿಸುವ ಬದಲು ನಾವು ಭೇಟಿ ತಪ್ಪಿಸಿಕೊಂಡೆವು ಎಂದರು.
ಜಯಪಾಲ್ ಮಂಡಿಸಿದ ನಿಲುವಳಿ ಭಾರತಕ್ಕೆ ಸಂಬಂಧಿಸಿ ಮಹತ್ವಪೂರ್ಣ ವಾದುದು. ಅಲ್ಲದೆ, ಇದಕ್ಕೆ ರಿಪಬ್ಲಿಕನರು ಸೇರಿದಂತೆ 29 ಸಹ ಪ್ರಾಯೋಜಕರಿದ್ದಾರೆ. ಅಲ್ಲದೆ, ಹೌಡಿ ಮೋದಿ ಸಮಾವೇಶದಲ್ಲಿ ಭಾಗಿಯಾಗಿರುವ ಭಾರತ ಮೂಲದ ಏಕೈಕ ರಾಜಕಾರಣಿ ಪ್ರಮೀಳಾ ಜಯಪಾಲ್ ಎಂದು ಅವರು ಹೇಳಿದರು.
ಅಮೆರಿಕದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಂಟಿ ಕಾರ್ಯಕ್ರಮದಲ್ಲಿ ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಘೋಷಣೆ ಕುರಿತು ಮೆನನ್ ಆಕ್ಷೇಪ ವ್ಯಕ್ತಪಡಿಸಿದರು.







