ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಇನ್ನೆಷ್ಟು ವರ್ಷ?
ಮಾನ್ಯರೇ,
ಉತ್ತರಕನ್ನಡ ಜಿಲ್ಲೆಯ ಸಮಸ್ತ ಅಭಿವೃದ್ಧಿಗೆ ಪೂರಕವಾಗಿರುವ ಈ ಕೆಳಗಿನ ಯೋಜನೆಗಳನ್ನು ಮಾನ್ಯ ಮುಖ್ಯಮಂತ್ರಿ, ಪ್ರಧಾನಿ ಹಾಗೂ ಕೇಂದ್ರಸರಕಾರದ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದೊಂದಿಗೆ, ಅತಿ ಕ್ಷಿಪ್ರವಾಗಿ ಕಾಲಮಿತಿಯೊಳಗಡೆ ಪೂರ್ಣಗೊಳಿಸಬೇಕಾಗಿ ವಿನಂತಿ
1.ಹುಬ್ಬಳ್ಳಿ-ಅಂಕೋಲಾ ಹಾಗೂ ತಾಳಗುಪ್ಪಾ-ಸಿರ್ಸಿ-ಹುಬ್ಬಳ್ಳಿ ರೈಲ್ವೆ ಮಾರ್ಗಗಳ ನಿರ್ಮಾಣ
2.ಹುಬ್ಬಳ್ಳಿ-ಅಂಕೋಲಾ ರಾಷ್ಟೀಯ ಹೆದ್ದಾರಿ ರಸ್ತೆಯ ವಿಸ್ತೀರ್ಣ ಮತ್ತು ಅಗಲೀಕರಣ
3. ಉತ್ತರಕನ್ನಡ ಜಿಲ್ಲೆಯ ಕಾರವಾರ ಬಂದರು ಹಾಗೂ ಅಂಕೋಲಾ ತಾಲೂಕಿನ ಬೇಲೆಕೇರಿಯ ಬಂದರು ಅಭಿವೃದ್ಧಿ.
4. ಕಾರವಾರ-ಅಂಕೋಲಾ ತಾಲೂಕಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ.
5. ಉತ್ತರ ಕನ್ನಡ ಜಿಲ್ಲೆಯ ಯಾವುದೇ ಭಾಗದಲ್ಲಿ ಸುಸಜ್ಜಿತ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪನೆ.
6. ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಕಲ ಮೂಲಸೌಕರ್ಯಗಳನ್ನು ಅತೀ ಶೀಘ್ರ ಅಭಿವೃದ್ಧಿಗೊಳಿಸುವುದು.
ಈ ಮೇಲಿನ ಎಲ್ಲ ಯೋಜನೆಗಳಿಗೆ ಬರುವ ಮುಂಗಡ ಪತ್ರ (ಬಜೆಟ್)ದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅತಿ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿ ಕಾಲಮಿತಿಯೊಳಗೆ ಪೂರ್ಣಗೊಳಿಸಿದರೆ ಮಾತ್ರ ಸಮಗ್ರ ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗಬಹುದು,
ಈ ಸಲ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇರುವುದರಿಂದ ಸಮಸ್ತ ಉತ್ತರಕನ್ನಡ ಜಿಲ್ಲೆಯ ಜನತೆ ಸರಕಾರದಿಂದ ಈ ನಿರೀಕ್ಷೆಯನ್ನು ಮಾಡಬಹುದಲ್ಲವೇ?
ಕೆಲವು ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಂಘ ಸಂಸ್ಥೆಗಳು ತಮ್ಮ ಪ್ರಚಾರ ಹಾಗೂ ಸ್ವಾರ್ಥ ಲಾಭಕ್ಕಾಗಿ ಜಿಲ್ಲೆಯ ವಿಭಜನೆಗೆ ಹೋರಾಡುವುದನ್ನು ಬಿಟ್ಟು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹೋರಾಡಿದರೆ ಮಾತ್ರ ಸಮಸ್ತ ಜನತೆಗೆ ಅನುಕೂಲವಾಗಲಿದೆ.







