ಮಾವೋವಾದಿಗಳಿಗೆ ನೆರವಾಗಿದ್ದ ಆರೋಪ: 4 ವರ್ಷಗಳಿಂದ ಜೈಲಿನಲ್ಲಿದ್ದ ಪತ್ರಕರ್ತನ ಖುಲಾಸೆ
ಸಾಂದರ್ಭಿಕ ಚಿತ್ರ
ಜಗದಾಲ್ಪುರ (ಛತ್ತೀಸ್ಗಡ),ಜ.4: ಮಾವೋವಾದಿಗಳ ಹೊಂಚುದಾಳಿಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ 2015ರಲ್ಲಿ ಛತ್ತೀಸ್ಗಡ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಪತ್ರಕರ್ತ ನಾಲ್ಕು ವರ್ಷ ಮೂರು ತಿಂಗಳ ಬಳಿಕ ಕೊನೆಗೂ ಬಂಧಮುಕ್ತಗೊಂಡಿದ್ದಾರೆ.
ಗುರುವಾರ ಇಲ್ಲಿಯ ನ್ಯಾಯಾಲಯವು ತನ್ನ ಖುಲಾಸೆಯ ತೀರ್ಪು ಪ್ರಕಟಿಸಿದ ಬೆನ್ನಿಗೇ ಸುದ್ದಿಗಾರರೊಂದಿಗೆ ತನ್ನ ಸಂತಸವನ್ನು ಹಂಚಿಕೊಂಡ ಯಾದವ್ (27),ಆದರೆ ಕಳೆದ ನಾಲ್ಕು ವರ್ಷಗಳು ಘೋರವಾಗಿದ್ದವು. ಬಂಧನಕ್ಕೆ ಮುನ್ನ ದರ್ಭಾದಿಂದ ದಿನ ಬಿಟ್ಟು ದಿನ ಸುದ್ದಿಗಳನ್ನು ಮಾಡುತ್ತಲೇ ಇದ್ದೆ. ತನ್ನ ವರದಿಗಾರಿಕೆಗೆ ಅಂತ್ಯ ಹಾಡಲೆಂದೇ ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು ಎಂದು ಹೇಳಿದರು.
ನವಭಾರತ ಹಿಂದಿ ದೈನಿಕಕ್ಕಾಗಿ ನಕ್ಸಲ್ ಚಟುವಟಿಕೆಗಳ ನೆಲವಾಗಿರುವ ಬಸ್ತಾರ್ನ ದರ್ಭಾ ವಿಭಾಗದ ಬಿಡಿ ಸುದ್ದಿಗಾರನಾಗಿ ಕೆಲಸ ಮಾಡುತ್ತಿದ್ದ ಯಾದವ್ ಪೊಲೀಸರು ಐವರು ಮಕ್ಕಳನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಗ್ರಾಮಸ್ಥರ ಹೇಳಿಕೆಗಳನ್ನು ವರದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ 2015,ಸೆ.29ರಂದು ಯಾದವರನ್ನು ಅವರ ನಿವಾಸದಿಂದ ಪೊಲೀಸರು ಬಂಧಿಸಿದ್ದರು.
2015,ಆ.21ರಂದು ಮಾವೋವಾದಿಗಳು ನಡೆಸಿದ್ದ ಹೊಂಚುದಾಳಿಯಲ್ಲಿ ಯಾದವ್ ಭಾಗವಹಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಈ ದಾಳಿಯಲ್ಲಿ ಓರ್ವ ಪೊಲೀಸ್ ಕೊಲ್ಲಲ್ಪಟ್ಟಿದ್ದು,ಇನ್ನೋರ್ವ ಗಾಯಗೊಂಡಿದ್ದ.
ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಯಾದವ್ ಸೇರಿದಂತೆ ಪ್ರಕರಣದ ಎಲ್ಲ 18 ಆರೋಪಿಗಳನ್ನು ಖುಲಾಸೆಗೊಳಿಸಿದೆ.